ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಮಾರ್ಚ್ನಲ್ಲಿ ಜಾರಿ ಮಾಡಿದ್ದ ಲಾಕ್ಡೌನ್ನಿಂದಾಗಿ ಪಟ್ಟಣ ಪ್ರದೇಶಗಳನ್ನು ತೊರೆದು ಹಳ್ಳಿಗಳಿಗೆ ವಾಪಸಾದ 13 ಲಕ್ಷ ಮಂದಿ ಕಾರ್ಮಿಕರು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದಿದ್ದಾರೆ. ಹಾಗೆಯೇ ಕಳೆದ 9 ತಿಂಗಳಲ್ಲಿ 11 ಕೋಟಿ 40 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ...ನರೇಗಾ: ಹೆಸರಿಗಷ್ಟೇ ಉದ್ಯೋಗ ಖಾತ್ರಿ ನೀಡುವ ಯೋಜನೆ!?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಅನಿರುದ್ಧ್ ಶ್ರವಣ ಈ ಕುರಿತು ಮಾಹಿತಿ ನೀಡಿದ್ದು, ತಿಂಗಳುಗಳ ಕಾಲ ಉದ್ಯೋಗವಿಲ್ಲದೆ ನಗರ ಪ್ರದೇಶದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಾಂತರ ಕೂಲಿ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಹೀಗೆ ಗ್ರಾಮೀಣ ಭಾಗಗಳಿಗೆ ಮರಳಿದ 5.41 ಲಕ್ಷ ಕುಟುಂಬಗಳ 13 ಲಕ್ಷದ 613 ಮಂದಿ ನರೇಗಾದಡಿ ಹೊಸದಾಗಿ ಜಾಬ್ ಕಾರ್ಡ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 50.41 ಲಕ್ಷ ಜನರು ಕೆಲಸ ನಿರ್ವಹಿಸಿದ್ದಾರೆ. ಇದರಿಂದಾಗಿ 2,57,481 ಕಾಮಗಾರಿಗಳು ಪೂರ್ಣಗೊಂಡಿವೆ. ಈ ವರ್ಷ 11 ಕೋಟಿ 40 ಲಕ್ಷ ಉದ್ಯೋಗ ದಿನಗಳನ್ನು ಸೃಷ್ಟಿಸಲಾಗಿದೆ. ಅಂತೆಯೇ ಈ ಹಿಂದಿನ ವರ್ಷಗಳಲ್ಲಿ ನರೇಗಾ ಅಡಿ ಇದ್ದ 100 ದಿನಗಳ ಉದ್ಯೋಗ ಭದ್ರತೆಯನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಕೊರೊನಾ ಬರುವ ಮುನ್ನ 2019-20ರ ಅವಧಿಯಲ್ಲಿ 11 ಕೋಟಿ 19 ಲಕ್ಷ ಉದ್ಯೋಗ ದಿನಗಳನ್ನು ನೀಡಿದ್ದರೆ, 2020-21ರ ಅವಧಿಯಲ್ಲಿ 11 ಕೋಟಿ 40 ಲಕ್ಷ ಉದ್ಯೋಗ ದಿನಗಳನ್ನು ನೀಡಲಾಗಿದೆ. ಆ ಪ್ರಕಾರ ಕೊರೊನಾ ವರ್ಷದಲ್ಲಿ 21 ಲಕ್ಷ ಹೆಚ್ಚುವರಿ ಉದ್ಯೋಗ ದಿನಗಳು ಕಾರ್ಮಿಕರಿಗೆ ಲಭ್ಯವಾಗಿವೆ.