ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆಯು ಕೂಡ ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಅಪರಾಧ ಚಟುವಟಿಕೆಗಳನ್ನು ತಡೆಯಲು ಪೊಲೀಸರು ನಾನಾ ರೀತಿಯ ಕಸರತ್ತು ಮಾಡುತ್ತಿದ್ದು, ಈ ಮೂಲಕ ಆರೋಪಿಗಳನ್ನು ಮಟ್ಟ ಹಾಕಲು ಖಾಕಿ ಪಡೆ ಸಜ್ಜಾಗಿದೆ.
ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ 100 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಆದರೆ ಇದು ಅನುಷ್ಠಾನಕ್ಕೆ ಬರಲು ಬಹಳ ಸಮಯಾವಕಾಶ ತೆಗೆದುಕೊಳ್ಳಬಹುದು. ಸದ್ಯ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕೆಲವೊಂದು ವ್ಯವಸ್ಥೆಗಳು ತಂತ್ರಜ್ಞಾನದ ಮುಖಾಂತರ ಕಾರ್ಯನಿರ್ವಹಿಸುತ್ತಿವೆ.
ಸದ್ಯ ಪೊಲೀಸ್ ಠಾಣೆಗಳಿಗೆ ಅಪರಾಧ ಸಂಬಂಧ ಕರೆ ಮಾಡಿದರೆ ಸಾಕು, ತಕ್ಷಣವೇ ಕೇಸ್ ದಾಖಲಿಸಿಕೊಂಡು ತೊಂದರೆಗೊಳಗಾದವರು ಮತ್ತು ಅಪರಾಧ ಮಾಡಿದವರ ಎರಡೂ ಖಾತೆಗಳನ್ನು ಜಪ್ತಿ ಮಾಡುವ ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಹಾಗೆಯೇ ಒಂಟಿಯಾಗಿ ಎಲ್ಲಾದರೂ ತೆರಳ್ತಿರುವಾಗ ಕೆಲ ಘಟನೆಗಳು ಸಂಭವಿಸಿದಾಗ ಪೊಲೀಸ್ ಇಲಾಖೆಯ 100 ಸಂಖ್ಯೆಗೆ ಹಾಗೂ ಇತರೆ ಸಂಬಂಧಿಸಿದ ಸಂಖ್ಯೆಗಳಿಗೆ ಕರೆ ಮಾಡಿದರೆ, ಘಟನೆ ನಡೆದ ಸ್ಥಳಗಳನ್ನು ತಲುಪಲು ಹೊಯ್ಸಳ ಬಹಳ ಪ್ರಾಮುಖ್ಯತೆ ಪಡೆದಿದೆ.
ಮೊದಲು ಠಾಣೆಗಳಲ್ಲಿ ಪ್ರತಿ ದಿನದ ಮಾಹಿತಿಯನ್ನು ಡೈರಿಯಲ್ಲಿ ಬರೆಯಬೇಕಿತ್ತು. ಸದ್ಯ ಕಂಪ್ಯೂಟರ್ ಮುಖಾಂತರ ನಮೂದು ಮಾಡಬಹುದು. ಹಾಗೆಯೇ ಎಫ್ಆರ್ಐಗಳು ಗಂಭೀರತೆಯ ಆಧಾರದ ಮೇರೆಗೆ ಕೂಡ ಬೇಗ ನಮೂದಾಗುತ್ತವೆ. ದೂರುದಾರರ ಕೈಗೆ ಕೂಡ ಎಫ್ಐಆರ್ ಪ್ರತಿಗಳು ಲಭ್ಯವಾಗಿ ದೂರುದಾರರಿಗೆ ಕೂಡ ಯಾವೆಲ್ಲಾ ಸೆಕ್ಷನ್ಗಳನ್ನು ಹಾಕಲಾಗಿದೆ ಎಂಬುದು ತಿಳಿಯುತ್ತದೆ. ಹಾಗೂ ನ್ಯಾಯಾಲಯದಲ್ಲಿ ಸೆಕ್ಷನ್ ಅಡಿ ಮಾತಾನಾಡಲು ಒಂದು ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ಗೆ ಸೈಬರ್ ಸವಾಲು: ತಜ್ಞರು ಏನಂತಾರೆ?
ಇನ್ನು ಸಣ್ಣಪುಟ್ಟ ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಿಗೆ ಆಲೆಯುವುದನ್ನು ತಪ್ಪಿಸಲು ಇ ಲಾಸ್ಟ್ ಪೋರ್ಟಲ್, ಸುರಕ್ಷಾ ಆ್ಯಪ್, ನಮ್ಮ 100 ವ್ಯವಸ್ಥೆ ಮಾಡಲಾಗಿದೆ. ಜನ ಸಣ್ಣ ವಿಷಯಗಳಿಗೆ ದೂರು ಕೊಡಲು ಪೊಲೀಸ್ ಠಾಣೆ ಹೊಗಬೇಕಾಗುತ್ತದೆ. ಹೀಗಾಗಿ ಮೊಬೈಲ್ ಕಳ್ಳತನ, ಲ್ಯಾಪ್‌ಟಾಪ್, ಅಂಕಪಟ್ಟಿ ಇನ್ನಿತರೆ ವಸ್ತು ಕಳುವಾದರೆ ಇ ಲಾಸ್ಟ್ ಪೋರ್ಟಲ್ ಮುಖಾಂತರ ಮಾಹಿತಿ ನೀಡಬಹುದು.
ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಹಾಗೂ ನಗರ ಹಾಗೂ ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆ್ಯಕ್ಟೀವ್ ಆಗಿ ಕೆಲಸ ನಿರ್ವಹಣೆ ಮಾಡ್ತಿದ್ದಾರೆ. ಸದ್ಯ ಟ್ವಿಟರ್, ಫೇಸ್ಬುಕ್ ಸೇರಿದಂತೆ ಬೇರೆ ಬೇರೆ ವೆಬ್ಸೈಟ್ಗಳನ್ನು ಸಾರ್ವಜನಿಕರಿಗೆ ಸೀಮಿತ ಮಾಡಿ ಇಡಲಾಗಿದೆ. ಇದು ಪೊಲೀಸರು ಕಚೆರಿಯಲ್ಲಿಯೇ ಕುಳಿತು ಮಾನಿಟರಿಂಗ್ ಮಾಡಲು ಸಹಕಾರಿಯಾಗಿದೆ.
ಟ್ರಾಫಿಕ್ ಪೊಲೀಸರು ಕೂಡ ಮೊದಲಿನ ಹಾಗೆ ರಸ್ತೆ ಬದಿ, ಸಿಗ್ನಲ್ ಬಳಿ ಹೆಚ್ಚಾಗಿ ನಿಲ್ಲದೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ವಾಹನ ಸವಾರರು ನಿಯಮ ಉಲ್ಲಂಘನೆ ಮಾಡುವಾಗ ತಕ್ಷಣ ಡಿಜಿಟಲ್ ಎಫ್.ಟಿ.ವಿ.ಆರ್ ಮೊಬೈಲ್ ಆ್ಯಪ್ ಮೂಲಕ ಕ್ಯಾಪ್ಚರ್ ಮಾಡಿ, ದಂಡ ವಿಧಿಸುತ್ತಾರೆ. ಸಿಗ್ನಲ್ ಬಳಿಯಿರುವ ಕ್ಯಾಮರಾಗಳು ಕೂಡ ಕಾಣುವ ದೃಶ್ಯ ಸೆರೆ ಹಿಡಿದಾಗ ಪೊಲೀಸ್ ಠಾಣೆಗಳಲ್ಲಿ ಕೂತು ಮಾನಿಟರಿಂಗ್ ಮಾಡಬಹುದು.
ತಂತ್ರಜ್ಞಾನ ಹೆಚ್ಚಾದಂತೆ ಅಪರಾಧ ಹೆಚ್ಚಾಗುತ್ತಿದ್ದು, ಸದ್ಯ ಅಪರಾಧಗಳನ್ನು ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನ ಬಳಸಲಾಗುತ್ತದೆ. ಹಾಗೂ ಅವುಗಳನ್ನು ಮಟ್ಟ ಹಾಕಲು ಇನ್ನಷ್ಟು ಅಭಿವೃದ್ಧಿಯಾಗಬೇಕಾದದ್ದು ಅನಿವಾರ್ಯವಾಗಿದೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಹೈ ಕ್ವಾಲಿಟಿ ಸಿಸಿಟಿವಿಗಳನ್ನು ಪ್ರತಿ ಜಂಕ್ಷನ್, ಸೂಕ್ಷ ಪ್ರದೇಶ, ಕ್ರೈಂ ಚಟುವಟಿಕೆ ನಡೆಯುವ ಸ್ಥಳ, ಮಾಲ್, ಪಬ್ ಹಾಗೂ ರಸ್ತೆಗಳ ಬಳಿ ಅಳವಡಿಕೆ ಮಾಡಿದ್ದಾರೆ. ಸಿಸಿಟಿವಿಗಳನ್ನು ಪೊಲೀಸ್ ಠಾಣೆಯಲ್ಲೇ ಕುಳಿತು ಸಿಬ್ಬಂದಿ ಮಾನಿಟರಿಂಗ್ ಮಾಡಲಿದ್ದಾರೆ. ಪ್ರತಿಯೊಬ್ಬರ ಚಲನವಲನ, ವಾಹನಗಳ ನಂಬರ್, ಅನುಮಾನಾಸ್ಪದ ವ್ಯಕ್ತಿಗಳ ಮುಖ ಚಹರೆ ಇದರಲ್ಲಿ ಸೆರೆಯಾಗಲಿದೆ.