ಬೆಂಗಳೂರು : ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯಡಿ 46 ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಗಿದೆ. ಆರು ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಮುಗಿಸಿ ಮನೆಗಳ ಹಸ್ತಾಂತರ ಮಾಡಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಇಂದು ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಮನೆ ಆಯ್ಕೆ ಪ್ರಕ್ರಿಯೆಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಾಂಕೇತಿಕವಾಗಿ ಅಂಗವಿಕಲ ಸಂಪತ್ ಕುಮಾರ್, ಕಮಲಮ್ಮ, ಮಂಜುಳಾ, ಚಂದ್ರಕಲಾ, ರಮೇಶ್, ನಾಗೇಂದ್ರಯ್ಯ, ಸಾವಿತ್ರಮ್ಮ, ಶಿಲ್ಪಾ, ಶಶಿಕಲಾ, ರೇಖಾ, ವೀಣಾ, ಗೀತಾ ರವಿ ಸೇರಿದಂತೆ ಕೆಲ ಫಲಾನುಭವಿಗಳಿಗೆ ತಾತ್ಕಾಲಿಕ ಮನೆ ಹಂಚಿಕೆ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿಗಳು ವಿತರಣೆ ಮಾಡಿದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮದಿಂದ ಬೆಂಗಳೂರು ನಗರದಲ್ಲಿ ಒಂದು ಲಕ್ಷ ಬಹುಮಹಡಿ ಕಟ್ಟಡದ ನಿರ್ಮಾಣ ಕಾಮಗಾರಿ ಯಕ್ಷ ಪ್ರಶ್ನೆಯಾಗಿತ್ತು. 323 ಎಕರೆ ಜಾಗದಲ್ಲಿ 46,499 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ.
ವಸತಿಗಾಗಿ ಈಗಾಗಲೇ 32 ಸಾವಿರ ಅರ್ಜಿಗಳು ಬಂದಿವೆ. 4000ಕ್ಕೂ ಹೆಚ್ಚು ಜನ ಮುಂಗಡ ಹಣ ಕಟ್ಟಿದ್ದಾರೆ. ಅವರಿಗೆ ಸಾಂಕೇತಿಕವಾಗಿ ಹಂಚಿಕೆ ಪತ್ರಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿ ಹಂಚುವ ಕೆಲಸ ಮಾಡಿದ್ದಾರೆ ಎಂದರು.
ನಗರದ 14 ರಿಂದ15 ಕಡೆ ಈ ರೀತಿಯ ಬಹುಮಹಡಿ ಮನೆಗಳ ನಿರ್ಮಾಣ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ಜಾಗ, ಸರ್ಕಾರಿ ಜಾಗವನ್ನು ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಇಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಹಂಚಿಕೆ ಮಾಡಿದ್ದಾರೆ. ನಾಲ್ಕೈದು ತಿಂಗಳಿನಲ್ಲಿ 46,000 ಮನೆಗಳನ್ನು ಕಟ್ಟಬೇಕು ಎನ್ನುವ ಸೂಚನೆ ನೀಡಲಾಗಿದೆ. 2.70 ಲಕ್ಷ ಸಾಮಾನ್ಯರಿಗೆ 3.5.ಲಕ್ಷ ಪರಿಶಿಷ್ಟ ಜಾತಿ ಪಂಗಡದವರಿಗೆ ಸಬ್ಸಿಡಿ ನೀಡಲಿದ್ದು, ಉಳಿದ ಹಣ ಫಲಾನುಭವಿಗಳು ಭರಿಸಬೇಕಿದೆ.
ಯೋಜನೆಗೆ ಈಗಾಗಲೇ ಮೂಲಸೌಕರ್ಯಗಳಿಗಾಗಿ 500 ಕೋಟಿಗಳನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಯೋಜನೆ ಪ್ರಗತಿಯಲ್ಲಿದೆ. ಈಗ ಉಳಿದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಪ್ರತಿದಿನವೂ ಆನ್ಲೈನ್ನಲ್ಲಿ ಎಲ್ಲಾ ಮಾಹಿತಿ ಅಪ್ಡೇಟ್ ಮಾಡಲಾಗುತ್ತಿದೆ. ಯಾವ ಜಾಗದ ಮನೆ ಬೇಕು ಎನ್ನುವ ಆಯ್ಕೆ ಫಲಾನುಭವಿಗಳಿಗೆ ಬಿಟ್ಟಿದ್ದು, ಅವರ ಆಯ್ಕೆಯ ಜಾಗದಲ್ಲಿ ಅವರು ಆಯ್ಕೆ ಮಾಡಬಹುದು. ಶೇ. 50ರಷ್ಟು ನಿವೇಶನ ಸ್ಥಳೀಯರಿಗೆ ಉಳಿದ ಶೇ.50ರಷ್ಟು ಬೆಂಗಳೂರು ನಿವಾಸಿಗಳಿಗೆ ಕೊಡಲಾಗುತ್ತದೆ. ಸೂರಿಲ್ಲದ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನನಿ ಮಾಡಿದರು.
ಲಕ್ಷ ಸೂರು ಯೋಜನೆಗೆ ಸಿದ್ದರಾಮಯ್ಯ ಅವರದ್ದಲ್ಲವೆ ಎನ್ನುವ ಪ್ರಶ್ನೆಗೆ ಕುಪಿತಗೊಂಡ ಸಚಿವರು, ಇದು ನನ್ನದು, ಸಿದ್ದರಾಮಯ್ಯನವರದ್ದಲ್ಲ. ಇದು ಮೋದಿ ಯೋಜನೆ. ವಾಸ್ತವಾಂಶ ಬಿಟ್ಟು ಬೇರೆ ವಿಚಾರಗಳನ್ನು ತಿಳಿದುಕೊಳ್ಳುತ್ತೀರಿ. ಸಿದ್ದರಾಮಯ್ಯ ಕಾಲದಲ್ಲಿ ಯೋಜನೆ ಬಂತು. ಆದರೆ, ನಂತರ ಏನು ಆಗಲಿಲ್ಲ. ಅವರ ಕಾಲದಲ್ಲಿ ಏನು ಆಗದಿರುವ ಕೆಲಸ ನಾವು ಮಾಡಿದ್ದೇವೆ ಎಂದು ಅಸಹನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಡಿ ಪ್ರಕರಣ : ಹೈಕೋರ್ಟ್ಗೆ ಮಧ್ಯಂತರ ವರದಿ ಸಲ್ಲಿಸಿದ ಎಸ್ಐಟಿ
ಎಲ್ಲಾ ಸರ್ಕಾರದ ವೇಳೆ ಯೋಜನೆಗಳು ಬರುತ್ತವೆ. ಆದರೆ, ಕಾರಣಾಂತರಗಳಿಂದ ವಿಳಂಬವಾಗುತ್ತವೆ. ಬಡವರಿಗೆ ಕೊಡುವ ಸೂರಿನಲ್ಲಿ ಇನ್ನೇನೋ ಯೋಚನೆ ಮಾಡುವುದು ಬೇಡ. ಕಾಲ ಅವರದ್ದಿರಬಹುದು. ಆದರೆ, ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ಕಾರ್ಯಗತಕ್ಕೆ ತರಲಾಗುತ್ತಿದೆ. ಬಡವರಿಗೆ ಸೂರು ಕೊಡಬೇಕು ಎಂದು ಪ್ರಧಾನಮಂತ್ರಿಗಳು ಏಕಕಾಲದಲ್ಲಿ ಒಂದು ಲಕ್ಷ ಬಹುಮಹಡಿ ಕಟ್ಟಲು 600 ಕೋಟಿಗಳನ್ನು ಕೊಟ್ಟರು. ಆದರೆ, ಸಿದ್ದರಾಮಯ್ಯ ಸರ್ಕಾರ ಉಪಯೋಗ ಮಾಡಿಕೊಳ್ಳಲಿಲ್ಲ. ಅವರು ಹೇಳಿದರು, ನಾವು ಮಾಡಿದೆವು ಎಂದರು.
ಸದ್ಯ 520 ಎಕರೆಗೂ ಮೇಲ್ಪಟ್ಟು ಜಾಗ ನಮ್ಮ ಸುಪರ್ದಿಗೆ ಬಂದಿದೆ. ಅದರಲ್ಲಿ 323 ಎಕರೆ ಜಾಗದಲ್ಲಿ ನಾವು ವಿವಿಧ ಹಂತದಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಇನ್ಮುಂದೆ ಕಟ್ಟುವ ಯಾವುದೇ ಮನೆಗಳು ಕೂಡ ದೊಡ್ಡ ದೊಡ್ಡ ಅಂತಸ್ತಿನ ಕಟ್ಟಡ ಕಟ್ಟಲ್ಲ. ಇನ್ಮುಂದೆ ಜಿ ಪ್ಲಸ್ 3 ಹೊರತುಪಡಿಸು ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಮಾಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ