ಬೆಂಗಳೂರು: ಕೊರೊನಾ ಲಾಕ್‌ಡೌನ್ ಸಡಿಲಿಕೆಯ ನಂತರ ಮಹಾನಗರಿ ಬೆಂಗಳೂರಿನಲ್ಲಿ ಮದ್ಯದ ಅಂಗಡಿ ಹುಡುಕುವುದಕ್ಕಿಂತ ಹೋಟೆಲ್‌ಗಳನ್ನು ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ವೈನ್‌ಸ್ಟೋರ್‌ಗಳು ತೆರೆದಿದ್ದರೂ ಸಹ ಹೋಟೆಲ್‌ಗಳ ಬಾಗಿಲು ಮಾತ್ರ ಮುಚ್ಚಿವೆ.
ಮಹಾನಗರದಲ್ಲಿ ವೈನ್ಸ್ಟೋರ್ಗಳೆಲ್ಲಾ ತೆರೆದಿವೆ. ಗಲ್ಲಿ ಗಲ್ಲಿಗಳಲ್ಲಿಯೂ ಶರಾಬು ಸಿಗ್ತಿದೆ. ಆದರೆ ಊಟ, ತಿಂಡಿ ಅಂತಾ ಹೋಟೆಲ್ ಹುಡುಕಿಕೊಂಡು ಹೋದರೆ ಕಣ್ಣಳತೆಗೊಂದರಂತೆ ಇರುವ ಹೋಟೆಲ್‌ಗಳ ನಾಮಫಲಕ ಸಿಗುವುದೇ ಹೊರತು ನಮ್ಮನ್ನು ಸ್ವಾಗತಿಸುವುದು ಮಾತ್ರ ಹೋಟೆಲ್‌ನ ಮುಚ್ಚಿರುವ ಬಾಗಿಲುಗಳು ಮಾತ್ರ.!
ಪಾರ್ಸೆಲ್ ಸೇವೆಗೆ ಮಾತ್ರ ಅನುಮತಿಸಿರುವ ಕಾರಣಕ್ಕೆ ಬಹುತೇಕ ಹೋಟೆಲ್ ಹಾಗು ದರ್ಶಿನಿಗಳು ಆರಂಭಗೊಂಡಿಲ್ಲ. ಜನವಸತಿ ಪ್ರದೇಶದಲ್ಲಿ ಅಲ್ಲೊಂದು, ಇಲ್ಲೊಂದು ಹೋಟೆಲ್‌ಗಳು ತೆರೆಯುತ್ತಿದ್ದು ಪಾರ್ಸಲ್ ಸೇವೆ ನೀಡುತ್ತಿವೆ. ಆದ್ರೂ ಸಹ ನಗರದ ಬಹುತೇಕ ಭಾಗದಲ್ಲಿ, ವಿಶೇಷವಾಗಿ ವಾಣಿಜ್ಯ ಚಟುವಟಿಕೆ ನಡೆಯುವ ಸ್ಥಳಗಳಲ್ಲಿನ ಹೋಟೆಲ್ ಹಾಗು ದರ್ಶಿನಿಗಳು ಆರಂಭಗೊಂಡಿಲ್ಲ.
ರೇಸ್ ಕೋರ್ಸ್ ರಸ್ತೆ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮೆಜೆಸ್ಟಿಕ್, ಕೆ.ಜಿ ರಸ್ತೆ, ಗಾಂಧಿನಗರ, ಮಾರ್ಕೆಟ್, ಬಸವನಗುಡಿ, ಬನಶಂಕರಿ, ಯಶವಂತಪುರ, ಜಯನಗರ, ವಿಜಯನಗರ, ಕೋರಂಮಗಲ, ಜೆ.ಪಿ ನಗರ, ಸದಾಶಿವನಗರ, ಶಿವಾಜಿನಗರ, ಯಲಹಂಕ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಎಲ್ಲಿ ಸಂಚರಿಸಿದರೂ ವೈನ್‌ಸ್ಟೋರ್‌ಗಳು ಕಾಣಸಿಗುತ್ತವೆ. ಆದರೆ ಊಟೋಪಹಾರಕ್ಕಾಗಿ ಖಾನಾವಳಿಗಳಿಲ್ಲ.
ಇಷ್ಟು ದಿನ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಅಲ್ಲಲ್ಲಿ ಉಚಿತವಾಗಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದರು. ಆದರೆ ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವ ಕಾರಣ ನಗರದಲ್ಲಿ ಹೆಚ್ಚಿನ ಜನ ದಟ್ಟಣೆ ಕಾಣುತ್ತಿದ್ದು ಆಹಾರ ಪೊಟ್ಟಣಗಳನ್ನು ವಿತರಣೆ ಮಾಡುವ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಜನರಿಗೆ ಊಟ ತಿಂಡಿ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.