ಬೆಂಗಳೂರು: ಹೋಟೆಲ್ನ ಬಾಗಿಲು ಮುಚ್ಚುವ ವಿಚಾರವಾಗಿ ಇಬ್ಬರು ಪೊಲೀಸ್ ಪೇದೆಗಳು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಪುಟ್ಟೇನಹಳ್ಳಿ ಮುಖ್ಯರಸ್ತೆಯ ಅಪರಂಜಿ ಬಿರಿಯಾನಿ ಮನೆ ಹೋಟೆಲ್ ಕ್ಯಾಶಿಯರ್ ಅಭಿ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ತಡರಾತ್ರಿ 11 ಗಂಟೆಗೆ ಹೋಟೆಲ್ ಕ್ಲೋಸ್ ಮಾಡದಿದ್ದಕ್ಕೆ ಪುಟ್ಟೇನಹಳ್ಳಿ ಠಾಣಾ ಪೊಲೀಸ್ ಕಾನ್ಸ್ಟೇಬಲ್ಗಳಿಬ್ಬರು ಬಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆಂದು ಕ್ಯಾಶಿಯರ್ ಅಭಿ ಹಾಗೂ ಆತನ ಸಹೋದರ ಆರೋಪಿಸಿದ್ದಾರೆ.
ಹೋಟೆಲ್ನ ಸಿಸಿಟಿವಿಯಲ್ಲಿ ಹಲ್ಲೆ ಮಾಡಿದ ದೃಶ್ಯ ಸೆರೆಯಾಗಿದೆ. ನಿತ್ಯ ಅಭಿ ಹಾಗೂ ಪ್ರಭಾಕರ್ ಸಹೋದರರಿಗೆ ಪೊಲೀಸರು ಮಾಮೂಲಿ ಕೇಳ್ತಿದ್ದರಂತೆ. ನಿನ್ನೆಯೂ ಸಹ ರಾತ್ರಿ 11 ಗಂಟೆಗೆ ಬಂದಿದ್ದ ಕಾನ್ಸ್ಟೇಬಲ್ಗಳಿಬ್ಬರು ಹೋಟೆಲ್ನಲ್ಲಿದ್ದ ಅಭಿ ಬಳಿ ಹಣ ಕೇಳಿದ್ದಾರೆ.
ಯಾಕೆ ಏನು ಎಂದು ಅಭಿ ಪ್ರಶ್ನಿಸಿದ್ದಕ್ಕೆ ಹೋಟೆಲ್ ಕ್ಲೋಸ್ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಅಭಿ ಕಸ್ಟಮರ್ಗಳಿದ್ದಿದ್ದರಿಂದ ಕ್ಲೋಸ್ ಮಾಡೋಕೆ, ಸಮಯ ಕೊಡಿ ಅಂದಿದ್ದಕ್ಕೆ ಸಾರ್ವಜನಿಕವಾಗಿ ಆತನಿಗೆ ಲಾಠಿಯಿಂದ ಥಳಿಸಿ, ಮತ್ತೋರ್ವ ಕೆಲಸಗಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ ಅಂತಾ ಸಹೋದರರಿಬ್ಬರು ಆರೋಪಿಸ್ತಿದ್ದಾರೆ. ಕಾನೂನನ್ನ ನಾವು ಉಲ್ಲಂಘಿಸಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ವಿಚಾರ ತಿಳಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಘಟನೆಯ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿಗೆ ಆದೇಶಿಸಿದ್ದಾರೆ.