ಬೆಂಗಳೂರು: ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್‌ಕಾಮ್ಸ್ ಇಂದಿನಿಂದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ ಆರಂಭಿಸಿದೆ. ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಲಾಲ್ಬಾಗ್ ಸಸ್ಯ ತೋಟದಲ್ಲಿ ಇಂದಿನಿಂದ ಜೂನ್ 5 ರವರೆಗೆ ನಡೆಯುವ ಮೇಳಕ್ಕೆ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಿಸಿದ್ದಾರೆ.
ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸೀಸನ್ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.30 ರಷ್ಟು ಮಾತ್ರ ಫಸಲು ಬಂದಿದೆ. ಆದರೂ, ಬಗೆಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾವಾಗಲಿದೆ ಎಂದು ಹೇಳಿದರು.
ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬಾಗಂಪಲ್ಲಿ, ಸಿಂಧೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿದೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ 7 ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಣ್ಣಿನ ದರ: ಮಾವಿನ ಹಣ್ಣು ಕೆಜಿಗೆ 32 ರೂ ರಿಂದ ಶುರುವಾಗಿ 215 ರೂ ವರೆಗೆ ಇದೆ. ಹಲಸಿನ ಹಣ್ಣು ಕೆಜಿಗೆ 25 ರೂ ನಿಗದಿಯಾಗಿದೆ. ಈ ಮೇಳದಲ್ಲಿ ತೋಟಗಾರಿಕೆ ಇಲಾಖೆ ಶೇ.10 ರಷ್ಟು ರಿಯಾಯಿತಿ ದರ ನಿಗದಿ ಮಾಡಿದೆ. ಒಟ್ಟಿನಲ್ಲಿ ಇಂದಿನಿಂದ 19 ದಿನಗಳ ಕಾಲ ಈ ಮೇಳ ನಡೆಯಲಿದೆ.
ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲೂ ಇಂದಿನಿಂದ ಮೂರು ದಿನಗಳ ಕಾಲ ಮಾವಿನ ಹಣ್ಣ ಹಾಗೂ ಹಲಸಿನ ಹಣ್ಣಿನ ಮೇಳ ಪ್ರಾರಂಭವಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಈ ಹಣ್ಣುಗಳ ಮಾರಾಟ ಮೇಳ ನಡೆಯುತ್ತಿದ್ದು, ತೋಟಗಾರಿಕೆ ಇಲಾಖೆ ನಾಲ್ಕು ಜಿಲ್ಲೆಯ 23 ರೈತರಿಗೆ ಉಚಿತವಾಗಿ ಒಟ್ಟು 24 ಮಳಿಗೆಗಳನ್ನು ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 5. 30 ರವೆರೆಗೆ ಮೇಳ ತೆರೆದಿರಲಿದ್ದು, ಒಟ್ಟು 40 ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟಕ್ಕಿರಲಿದೆ.
ಇದನ್ನೂ ಓದಿ: ಮೈಸೂರು: ಕುಪ್ಪಣ್ಣ ಪಾರ್ಕ್ನಲ್ಲಿ ಮೂರು ದಿನಗಳ ಮಾವು ಮೇಳ.. ಇಂದಿನಿಂದ ಆರಂಭ