ಬೆಂಗಳೂರು: ರಾಜ್ಯಕ್ಕೆ ಅಧಿಕೃತ ರಾಜ್ಯ ಬಾವುಟ ಬೇಕು. ಕೇಂದ್ರದ ಅನುಮತಿ ಸಿಕ್ಕರೆ ರಾಜ್ಯಕ್ಕೂ ಗೌರವ ಸಿಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಕನ್ನಡ ಬಾವುಟ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕನ್ನಡ ಬಾವುಟ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೆ ಕೇಂದ್ರ ಒಪ್ಪಿಗೆ ಕೊಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ಒತ್ತಡ ಅಂದರೆ ತಲೆ ಮೇಲೆ ಕಲ್ಲು ಇಡುವುದಲ್ಲ. ಇನ್ನೊಂದು ಪತ್ರ ಬರೆದು ಆಗ್ರಹ ಮಾಡಬಹುದು ಅಷ್ಟೆ ಎಂದರು.
ಯಾವ ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ: ಸುರ್ಜೇವಾಲಾ, ವೇಣುಗೋಪಾಲ್ ರಾಜ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಸುರ್ಜೇವಾಲಾ, ವೇಣುಗೋಪಾಲ್ ನಮ್ಮನ್ನು ಭೇಟಿ ಮಾಡಿಲ್ಲ. ಸಿಎಂ, ಡಿಸಿಎಂ ಅವರನ್ನು ಮಾತ್ರ ಭೇಟಿ ಮಾಡಿದ್ದಾರೆ. ಯಾವ ವಿಚಾರ ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ ಎಂದರು.
ಕಲೆಕ್ಷನ್ಗಾಗಿ ಬಂದಿದ್ದಾರೆ ಎಂಬ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಅವರು ಅದನ್ನೇ ಹೇಳಬೇಕು. ಅದನ್ನು ಬಿಟ್ಟು ಬೇರೆ ಏನನ್ನು ಹೇಳುತ್ತಾರೆ?. ಬ್ಯಾಗ್ನ್ನು ಹೆಗಲ ಮೇಲೆ ಹಾಕೊಂಡು ಹೋಗುತ್ತಾರೆ. ಆ ರೀತಿಯಲ್ಲಿ ಮಾತನಾಡಬಾರದು. ಅವರಿದ್ದಾಗ ಸೆಕ್ರೆಟರಿ ಬಂದು ಆ ರೀತಿ ಮಾಡ್ತಿದ್ರಾ?. ಅವರ ಪ್ರಧಾನ ಕಾರ್ಯದರ್ಶಿ ಪದೇ ಪದೆ ರಾಜ್ಯಕ್ಕೆ ಬರುತ್ತಿದ್ದರು. ಈಗ ನಾವು ಕೂಡ ಅದನ್ನೇ ಹೇಳಬೇಕಲ್ವಾ? ಎಂದು ಪ್ರಶ್ನಿಸಿದರು.
ಕೆಇಎ ಪರೀಕ್ಷೆ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ಮಾಡಲು ಹೇಳಿದ್ದೇವೆ. ಇಲಾಖೆ ಕೂಡ ತನಿಖೆ ಮಾಡುತ್ತಿದೆ. ಇನ್ನು ಮಾಹಿತಿ ತೆಗೆದುಕೊಳ್ಳಬೇಕು. ರಿ ಎಕ್ಸಾಮ್ ಮಾಡಬೇಕಾ, ಬೇಡ್ವಾ ಇಲಾಖೆಗೆ ಬಿಟ್ಟಿದ್ದು. ಚರ್ಚೆ ಮಾಡಿ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ. ಕಂಪ್ಲೈಂಟ್ ಬಗ್ಗೆ ನಮ್ಮ ಇಲಾಖೆ ತೀರ್ಮಾನ ಮಾಡುತ್ತದೆ. ಪಿಎಸ್ಐ ಅಕ್ರಮದಲ್ಲಿ ಆರ್. ಡಿ ಪಾಟೀಲ್ ಲಿಂಕ್ ಇದೆ ಎಂದು ಗೊತ್ತಾಗಿದೆ. ಅದೆಲ್ಲ ಪರಿಶೀಲನೆ ಮಾಡುತ್ತಾರೆ. ಲಿಂಕ್ ಇದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇಷ್ಟು ದಿನ ಏನು ಮಾಡುತ್ತಿದ್ದರು?: ಬಿಜೆಪಿ ಬರ ಅಧ್ಯಯನ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಮಾಡಲಿ, ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು. ಸರಿಸಮಾರು 3 ತಿಂಗಳು ಕಳೆಯಿತು ಬರ ಶುರುವಾಗಿ. ನಾವು ಘೋಷಣೆ ಮಾಡಿದ್ದೇವೆ. 224ರಲ್ಲಿ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. 37 ಸಾವಿರ ಕೋಟಿ ನಷ್ಟ ಎಂಬ ಅಂದಾಜಿದೆ. 17 ಸಾವಿರ ಕೋಟಿ ನಷ್ಟ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರಕ್ಕೆ ಸರ್ಕಾರ ಪ್ರಸ್ತಾವನೆ ಕಳಿಸಲಾಗಿದೆ ಎಂದರು.
ಅದೆಲ್ಲ ನೋಡದೇ ಅಲ್ಲಿ ಹೋಗಿ ಏನು ಮಾಡುತ್ತಾರೆ. ನಮಗೆ ಹಣವನ್ನಾದರೂ ಕೊಡಿಸುವುದಕ್ಕೆ ಹೇಳಿ. ಕೇಂದ್ರ ಸರ್ಕಾರದಿಂದ ಒಂದು ಪೈಸೆ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರದಿಂದ ತಂಡ ಬಂದಿತ್ತು. ಎಲ್ಲ ಗ್ರೀನ್ ಕವರ್ ಇದೆ ಎಂದು ಬರೆದಿದ್ದಾರೆ. ಅವರು ಬರೆಯುವ ಎರಡು ದಿನಗಳ ಮುಂಚೆ ಮಳೆಯಾಗಿದೆ. ಎಲ್ಲೋ ಹಸಿರು ಚಿಗುರಿತ್ತು, ಅಷ್ಟಕ್ಕೇ ಬೆಳೆ ಬರುತ್ತದಾ?. ಇದನ್ನು ಕೂಲಂಕಷವಾಗಿ ಚರ್ಚೆ ಮಾಡಬೇಕು ಎಂದರು.
ಏನನ್ನು ಮಾಡಿಲ್ಲ ಕಾಟಾಚಾರಕ್ಕೆ ಬರ ಅಧ್ಯಯನ ಮಾಡಿದ್ದಾರೆ. ಹಣಕ್ಕೆ ಪ್ರಸ್ತಾವನೆ ಮಾಡಿದ್ದೇನೆ. NDRF ನಡಿಯಾದರೂ ಅಡ್ವಾನ್ಸ್ ಆಗಿ ಹಣ ಕೊಡಬೇಕು. ಆ ಅಡ್ವಾನ್ಸ್ ಹಣವನ್ನೂ ಕೂಡ ಕೊಟ್ಟಿಲ್ಲ. ಇದರ ಜೊತೆಗೆ ಸ್ಪೆಷಲ್ ಗ್ರ್ಯಾಂಟ್ ಅಂತ ಕೊಡಬೇಕು. ನಮ್ಮ ಸರ್ಕಾರ ಇರಬೇಕಾದರೆ 2 ಸಾವಿರ ಕೋಟಿ ಸ್ಪೆಷಲ್ ಗ್ರ್ಯಾಂಟ್ ಎಂದು ಕೊಟ್ಟಿದ್ದರು. ರಾಜ್ಯದ ಹಿತದೃಷ್ಟಿಯಿಂದ ಕೊಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: 'ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ': ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ