ಬೆಂಗಳೂರು: ಆಟೋ ಚಲಾಯಿಸುತ್ತಲೇ ಬೀಗ ಹಾಕಿದ ಮನೆಗಳನ್ನೇ ಗುರುತಿಸಿ ಕಳ್ಳತನ ಮಾಡುತ್ತಿದ್ದ ಯುವಕನೋರ್ವನನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಥಣಿಸಂದ್ರ ನಿವಾಸಿ ಪೈಜಾನ್ ಅಹಮ್ಮದ್ (19) ಬಂಧಿತ ಆರೋಪಿ. ಕೆಲ ವರ್ಷಗಳಿಂದ ಆಟೋ ಚಲಾಯಿಸುತ್ತಿದ್ದ ಈತ, ಗ್ರಾಹಕರನ್ನು ಇಳಿಸಿ ಹೋಗುವ ವೇಳೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿ, ಗುರುತು ಮಾಡಿಟ್ಟುಕೊಳ್ಳುತ್ತಿದ್ದ. ಕಳ್ಳತನಕ್ಕೆ ಸೂಕ್ತವಾದ ಜಾಗ ಎಂದು ಅರಿತ ನಂತರ ಮನೆಗೆ ಹಾಕಿದ ಬೀಗ ಒಡೆದು ಒಳನುಗ್ಗಿ ನಗ ನಾಣ್ಯ ದೋಚುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿತ್ತು. ಕೂಡಲೇ ತನಿಖೆ ನಡೆಸಿದ ಬಂಡೆಪಾಳ್ಯ ಇನ್ಸ್ಪೆೆಕ್ಟರ್ ಎಸ್.ಟಿ. ಯೋಗೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಖದೀಮನ ಹೆಡೆಮುರಿಕಟ್ಟಿದ್ದಾರೆ. ಕದ್ದ ಮಾಲುಗಳನ್ನು ಮಾರಲು ಮುಂದಾದಾಗ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತನಿಂದ 2.5 ಲಕ್ಷ ಮೌಲ್ಯದ 47 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.