ಬೆಂಗಳೂರು : ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಸಿಎಂ ಮತ್ತು ಡಿಸಿಎಂಗಳ ವಿಡಿಯೋ ಕಾನ್ಫರೆನ್ಸ್ ಕಡೇ ಕ್ಷಣದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ.
ಮಹಾತ್ಮಾ ಗಾಂಧೀಜಿ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯದ ಸಿಎಂ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ಇದಕ್ಕಾಗಿ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಲು ಬಿಜೆಪಿ ಕಚೇರಿಗಳನ್ನು ಆಗಮಿಸಿದ್ದರು. ಆದರೆ, ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಕೊನೆ ಕ್ಷಣದಲ್ಲಿ ವಿಡಿಯೋ ಕಾನ್ಫರೆನ್ಸ್ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಯಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಭಾಗಿಯಾಗಲಿದ್ದಾರೆ.
ಸಿಎಂ ಆಗಮನದ ಹಿನ್ನಲೆ ಭದ್ರತೆ: ಬಿಜೆಪಿ ಕಚೇರಿಗೆ ಸಿಎಂ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿ ಎದುರಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಬಿಜೆಪಿ ಕಚೇರಿ ಎದುರಿನ ರಸ್ತೆಯನ್ನು ವಾಹನ ಸವಾರರಿಗೆ ಬಂದ್ ಮಾಡಲಾಗಿತ್ತು. ಹೀಗಾಗಿ ವಾಹನ ಸವಾರರು ಸುತ್ತಾಕಿಕೊಂಡು ಹೋಗಬೇಕಾದ ಸ್ಥಿತಿ ಇತ್ತು. ಇದರಿಂದ ಅರ್ಧ ಗಂಟೆ ರೋಡ್ ಬಂದ್ ಮಾಡಲಾಗಿತ್ತು. ನಂತರ ಸಿಎಂ ಆಗಮಿಸಲ್ಲ ಎನ್ನುವ ಮಾಹಿತಿ ಬರುತ್ತಿದ್ದಂತೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.