ಬೆಂಗಳೂರು : ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಗಳ ಕೇಸ್ ವಾಪಸ್ ವಿಚಾರವಾಗಿ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಬಹಳ ಜನ ಶಾಸಕರು ಬೇರೆ ಬೇರೆ ಸಂಸ್ಥೆಗಳ ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಪತ್ರ ಕೊಡ್ತಿದ್ದಾರೆ. ಕೇಸ್ ವಾಪಸ್ ತಗೊಳ್ಳಿ ಅಂದಾಕ್ಷಣ ವಾಪಸ್ ತೆಗೆದುಕೊಳ್ಳಲು ಆಗುವುದಿಲ್ಲ. ಅದಕ್ಕೊಂದು ಪದ್ದತಿ ಇದೆ. ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ವಿಷಯ ಮಂಡಿಸಬೇಕಾಗುತ್ತದೆ. ಸಬ್ ಕಮಿಟಿ ಸಾಧಕ-ಬಾಧಕದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತದೆ. ಈ ವಿಷಯ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಕ್ಯಾಬಿನೆಟ್ಗೆ ಬರುತ್ತದೆ. ಕ್ಯಾಬಿನೆಟ್ನಲ್ಲಿ ಅಂತಿಮ ತೀರ್ಮಾನ ಆಗುತ್ತದೆ. ಸತ್ಯಾಂಶವನ್ನು ನೋಡಿ ಕಾನೂನಾತ್ಮಕ ಅವಕಾಶ ಇದ್ದರೆ ಕೇಸ್ ವಾಪಸ್ ತೆಗೆದುಕೊಳ್ತೇವೆ ಎಂದರು.
ಉಡುಪಿ ವಿಡಿಯೋ ಬಗ್ಗೆ ಮಾತನಾಡಿ, ಘಟನೆ ಬಹಳ ಸಣ್ಣದು. ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಪ್ರಿನ್ಸಿಪಾಲ್ ಇದ್ದಾರೆ, ಕಾಲೇಜು ಸಮಿತಿ ಇದೆ. ಈ ಬಗ್ಗೆ ದೂರು ಸಲ್ಲಿಕೆಯಾಗಿಲ್ಲ. ರಾಜಕೀಯ ಮಾಡುವುದನ್ನು ಬಿಜೆಪಿಯವರು ಮೊದಲು ನಿಲ್ಲಿಸಬೇಕು. ಹಿಂದೆಲ್ಲ ಕಾಲೇಜುಗಳಲ್ಲಿ ಇದೆಲ್ಲ ನಡೆಯುತ್ತಿರಲಿಲ್ವಾ? ಎಂದು ಹೇಳಿದರು.
ಸಿದ್ದರಾಮಯ್ಯ ಪ್ರತಿಕ್ರಿಯೆ : ಸಿಎಂ ಸಿದ್ದರಾಮಯ್ಯ ರಾಜ್ಯದ ವಿವಿಧ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡುತ್ತಾ, ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಆರೋಪಿಗಳ ಪ್ರಕರಣ ವಾಪಸ್ ಪಡೆಯುವ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡ್ತೀವಿ ಎಂದರು. ಇದೇ ವೇಳೆ, ಶಾಸಕ ಬಿ.ಆರ್.ಪಾಟೀಲ್ ನನ್ನ ಪತ್ರವೇ ಅಲ್ಲ ಅಂದಿದ್ದಾರೆ. ಶಾಸಕಾಂಗ ಸಭೆ ಕರೆಯಿರಿ ಎಂದು ಅವರು ಪತ್ರ ಬರೆದಿದ್ದಾರೆ. ಆದರೆ ಯಾವುದೇ ಮಂತ್ರಿಯ ಹೆಸರು ಬರೆದಿಲ್ಲ. ಬಿಜೆಪಿಯವರ ಟ್ವೀಟ್ಗೆಲ್ಲ ಉತ್ತರ ಕೊಡಲ್ಲ. ಉಡುಪಿ ಘಟನೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿ ಹೊರಟು ಹೋದರು.
ಮುಸ್ಲಿಂ ನಾಯಕರ ಭೇಟಿ : ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರಿಣಾಮ ಮತ್ತು ಪಿತೂರಿ ಕುರಿತು ಚರ್ಚಿಸಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಹಾಗೂ ಭಾರತದ ಎಲ್ಲ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಮತ್ತು ಆದಿವಾಸಿ, ಬುಡಕಟ್ಟು, ದಲಿತ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಇದು ಕಸಿದುಕೊಳ್ಳಲಿದೆ ಎಂದು ದೂರಿದರು.
ಕಾರ್ಗಿಲ್ ವಿಜಯ ದಿವಸ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಉಪಸ್ಥಿತರಿದ್ದರು.
ಇದನ್ನೂ ಓದಿ : Bengaluru riot case: ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಕೇಸ್: ಗೃಹ ಸಚಿವರ ನಿರ್ದೇಶನಕ್ಕೆ ಬಿಜೆಪಿ ಆಕ್ಷೇಪ, ಹೋರಾಟದ ಎಚ್ಚರಿಕೆ