ಬೆಂಗಳೂರು: "ನಾಣ್ನುಡಿ ಇದೆ ಅಂತ ಸಮುದಾಯದ ಬಗ್ಗೆ ಕೀಳಾಗಿ ಮಾತಾಡೋದು ಸರಿಯಲ್ಲ. ಆ ತರ ಹೇಳಿಕೆಗಳನ್ನು ನಾನು ಸಹಿಸುವುದಿಲ್ಲ. ಸಚಿವರೇ ಆಗಲಿ, ಯಾರೇ ಆಗಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರ ವಿರುದ್ಧ ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾರೂ ಕೂಡಾ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಹೀಗೆ ಮಾತನಾಡೋರು ಅರ್ಥ ಮಾಡಿಕೊಳ್ಳಬೇಕು" ಎಂದರು.
"ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತಾಡೋದನ್ನು ಯಾರೇ ಆದರೂ ನಿಲ್ಲಿಸಬೇಕು. ಇದನ್ನು ನಿಲ್ಲಿಸಿದರೆ ಒಳ್ಳೆಯದು. ಇದನ್ನು ನಾನೂ ಕೂಡಾ ಸಹಿಸುವುದಿಲ್ಲ. ಹೀಗೆ ಮಾತಾಡೋದು ಒಂದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು. ಮಲ್ಲಿಕಾರ್ಜುನ ಏನ್ ಮಾತಾಡಿದ್ದಾರೆ ಗೊತ್ತಿಲ್ಲ. ಆದರೆ ಅದರ ಬಗ್ಗೆ ಪೇಪರ್ನಲ್ಲಿ ಓದಿದ್ದೇನೆ. ರಾಜಾಜಿನಗರ ಕೇಸ್ ವಿಧಾನಸೌಧಕ್ಕೆ ವರ್ಗ ಆಗಿದೆ. ಸಾರ್ವಜನಿಕ ಜೀವನದಲ್ಲಿದ್ದು ಬೇರೆ ಸಮುದಾಯದ ಬಗ್ಗೆ ಕೀಳಾಗಿ ಮಾತಾಡೋದು ಸರಿಯಲ್ಲ. ಹೀಗೆ ಮಾತಾಡಿದ್ರೆ ಅ ಸಮುದಾಯಕ್ಕೆ ನೋವಾಗಲ್ಲವೇ?. ಎರಡು ದೂರಿನ ಬಗ್ಗೆ ಸಿಎಂ ಜೊತೆ ಮಾತಾಡ್ತೇನೆ. ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.
ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಟೀಕೆ ಟಿಪ್ಪಣಿ ಮಾಡೋದಕ್ಕೆ ನಮಗೇನು ಅಭ್ಯಂತರ ಇಲ್ಲ. ಅವರಿಗೆ ಟೀಕೆ ಮಾಡೋ ಹಕ್ಕಿದೆ. ನಮ್ಮನ್ನು ತಿದ್ದೋ ಹಕ್ಕಿದೆ. ಆದರೆ ಇಲ್ಲಸಲ್ಲದ ಆರೋಪ ಮಾಡೋದು, ದಾಖಲಾತಿ ಇಲ್ಲದೆ ಮಾತಾಡೋದು ಸರಿಯಲ್ಲ. ಅವರು ಎರಡು ಬಾರಿ ಸಿಎಂ ಆದವರು. ಅವರು ಮಾತಾಡಿದ್ರೆ ಜನ ಗಮನಿಸುತ್ತಾರೆ. ಹೌದಪ್ಪ ಇವರು ಹೇಳೋದ್ರಲ್ಲಿ ಸತ್ಯ ಇರುತ್ತೆ ಅಂತ ಜನ ನಂಬ್ತಾರೆ. ಆದರೆ ಅವರು ಆರೋಪ ಮಾಡಿ ದಾಖಲಾತಿ ಬಿಡುಗಡೆ ಮಾಡದೇ ಹೋದ್ರೆ ಗೌರವ ಸಿಗುವುದಿಲ್ಲ" ಎಂದು ಹೇಳಿದರು.
ಇಷ್ಟು ಭ್ರಷ್ಟಾಚಾರ ಸರ್ಕಾರ ನೋಡಿಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, "ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಾವು ಜನರಿಗೆ ಮಾತು ಕೊಟ್ಟಿದ್ದೇವೆ. ಒಳ್ಳೆ ಆಡಳಿತ ಕೊಡ್ತೀವಿ ಅಂತ. ಸಿಎಂ ಮತ್ತು ಸಚಿವರು ಅದರಂತೆ ಕೆಲಸ ಮಾಡುತ್ತಿದ್ದಾರೆ. ಕೇವಲ ಆಪಾದನೆ ಮಾಡೋಕೆ ಅಂತ ಆರೋಪ ಮಾಡೋದು ಬೇಡ. ಸುಮ್ಮನೆ ಆರೋಪ ಮಾಡೋದು ವಿಪಕ್ಷಗಳಿಗೆ ಸರಿ ಅನ್ನಿಸೋದಿಲ್ಲ" ಎಂದು ಕುಮಾರಸ್ವಾಮಿ ವಿರುದ್ಧ ಪರಮೇಶ್ವರ್ ಕಿಡಿಕಾರಿದರು.
ಬಿಜೆಪಿಯಿಂದ ಕಾಂಗ್ರೆಸ್ಗೆ ಶಾಸಕರು ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿ ಶಾಸಕರು ಬರಬಹುದು. ಬಿಜೆಪಿಯಲ್ಲಿ ಬೇಸರವಾಗಿ, ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಂತ ಹೇಳಿ ಶಾಸಕರು ಬರಬಹುದು. ಬಿಜೆಪಿಯಿಂದ ಬರುವ ಶಾಸಕರನ್ನು ಸೇರ್ಪಡೆ ಮಾಡಿಕೊಳ್ತೀವಿ. ಈಗಾಗಲೇ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ. ಪರಿಶೀಲನೆ ಮಾಡಿ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ, ಕಾಂಗ್ರೆಸ್ ಲೀಡರ್‌ಶಿಪ್ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬಂದರೆ ಬರಬಹುದು" ಎಂದು ಆಹ್ವಾನ ನೀಡಿದರು.
"ಹಿಂದೆ ಪಕ್ಷ ಬಿಟ್ಟು ಹೋದೋರು ಬರಬಹುದು. ಪಕ್ಷ ಬಿಟ್ಟು ಹೋಗಿರುವವರು ವಾಪಸ್ ಬಂದಿರೋ ಉದಾಹರಣೆ ಇದೆ. ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ತೀವಿ ಅಂದ್ರೆ ಮಾಡಿಕೊಂಡು ಬರಬಹುದು. ಆದರೆ ಅವರಿಗೆ ಫಸ್ಟ್ ಬೆಂಚ್ ಸಿಗುವುಲ್ಲ, ಕ್ಲಾಸ್ ರೂಂಗೆ ಅವಕಾಶ ಇದೆ. ಅವರು ಮತ್ತೆ ಫಸ್ಟ್ ಬೆಂಚ್ ಸಿಗಬೇಕಾದ್ರೆ ತುಂಬಾ ದಿನ ಆಗುತ್ತೆ. ನನ್ನ ಜೊತೆ ಶಾಸಕರು ಚರ್ಚೆ ಮಾಡಿರೋ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಭರವಸೆ ಈಡೇರಿಸಿದ್ದೇವೆ" ಎಂದರು.
"ನುಡಿದಂತೆ ನಡೆದಿದ್ದೇವೆ. ಅದರಂತೆ ನಡೆದುಕೊಳ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುಬೇಕು. ಇದಕ್ಕೆ ಏನು ಬೇಕೋ ಅದನ್ನು ಮಾಡ್ತೇವೆ. ಜನರಿಗೆ ಭರವಸೆ ಈಡೇರಿಸೋದು ಒಂದು ಕಡೆಯಾದ್ರೆ ರಾಜಕೀಯ ಮಾಡೋದು ಮತ್ತೊಂದು ಕಡೆ. ಬಿಜೆಪಿ ಅವರು ಕಳೆದ ಬಾರಿ 25 ಸ್ಥಾನ ಪಡೆದಿದ್ದರು. ಈ ಬಾರಿ ನಾವು ಇಷ್ಟು ಸ್ಥಾನ ಪಡೆಯಬೇಕು ಅಂತ ಇದ್ದೇವೆ. ಅದರೆ ಜನ ತೀರ್ಮಾನ ಮಾಡ್ತಾರೆ" ಎಂದು ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿರಲು ಬಯಸಿದರೆ ಏನು ಮಾಡೋಕಾಗುತ್ತೆ: ಸಂಸದ ಡಿ.ಕೆ.ಸುರೇಶ್