ಬೆಂಗಳೂರು: ಅಕ್ರಮವಾಗಿ ನಗರದಲ್ಲಿ ವಾಸವಿದ್ದ ಆಫ್ರಿಕಾ ಪ್ರಜೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿರುವುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಣ್ಣೂರು, ಬಾಗಲೂರು, ಕೊತ್ತನೂರು, ಸಂಪಿಗೆಹಳ್ಳಿ ಬಳಿ ಆಪ್ರಿಕನ್ ಪ್ರಜೆಗಳು ಸಾರ್ವಜನಿಕರಿಗೆ ಕಿರುಕುಳ ನೀಡಿದ ಕಾರಣ 34 ಮನೆಗಳ ಮೇಲೆ ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲ್ದೀಪ್ ಜೈನ್ ಹಾಗೂ ಕೆ.ಪಿ. ರವಿಕುಮಾರ್ ನೇತೃತ್ವದಲ್ಲಿ ಐವರು ಎಸಿಪಿ, 18 ಜನ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ 120 ಸಿಬ್ಬಂದಿ ತಂಡ ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ದಾಳಿ ನಡೆಸಿ 85 ಜನರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ 20 ಜನ ಆಫ್ರಿಕನ್ ಪ್ರಜೆಗಳ ಬಳಿ ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ನೆಲೆಸಿರುವುದು ಗೊತ್ತಾಗಿದೆ. ಅವರು ವಾಸವಿದ್ದ ಮನೆಗಳಲ್ಲಿ ಖೋಟಾ ನೋಟು, ನಕಲಿ ಇಂಡಿಯನ್ ರೂಪಾಯಿ, ಅಮೆರಿಕನ್ ಡಾಲರ್, ನಕಲಿ ಯುಕೆ ಪೌಂಡ್ ಪತ್ತೆಯಾಗಿವೆ. ಸದ್ಯ ನಕಲಿ ನೋಟ್ ಪತ್ತೆಯಾದ ಮೂರು ಜನ ಆರೋಪಿಗಳು ಹಾಗೆ ಅಕ್ರಮವಾಗಿ ವಾಸವಿದ್ದ 17 ಜನರ ಮೇಲೆ ಪೂರ್ವ ವಿಭಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮನೆ ಮಾಲೀಕರು ಯಾವುದೇ ದಾಖಲೆಗಳನ್ನ ಪರಿಶೀಲನೆ ನಡೆಸದೆ ವಿದೇಶಿಗರಿಗೆ ಮನೆ ಬಾಡಿಗೆ ನೀಡುತ್ತಿರುವ ಅಂಶ ಬೆಳಕಿಗೆ ಬಂದಿದೆ.