ಬೆಂಗಳೂರು: ಮೈಸೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ್ದ ಹೇಳಿಕೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಷಾದ ವ್ಯಕ್ತಪಡಿಸಿದ್ದು, ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಸಂತ್ರಸ್ತೆಯನ್ನ ನನ್ನ ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ನನಗೂ ಆ ಹೇಳಿಕೆ ನೀಡಿದ ಬಳಿಕ ತುಂಬಾ ನೋವಾಗಿದೆ ಎಂದಿದ್ದಾರೆ.
ಪರಪ್ಪನ ಅಗ್ರಗಾರಕ್ಕೆ ಭೇಟಿ ನೀಡಿದ್ದ ವೇಳೆ ಗೃಹ ಸಚಿವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಗೃಹ ಸಚಿವನಾಗಿ ಅಧಿಕಾರಿಗಳಿಗೆ ಎಲ್ಲ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮುಖ್ಯಮಂತ್ರಿಗಳು ಕೂಡ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯಾರೂ ಆತಂಕ ಪಡುವುದು ಬೇಡ, ನಾನು ಆತಂಕದಿಂದ ಬೆಳಗ್ಗೆ ಹೇಳಿಕೆ ನೀಡಿದ್ದೆ, ಆ ಮಾತನ್ನು ಹಿಂತೆಗೆದುಕೊಂಡು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರ:
ಕಾಂಗ್ರೆಸ್ನವರು ವಿರೋಧ ಪಕ್ಷದವರು, ಅವರಿಗೆ ಟೀಕೆ ಮಾಡುವ ಹಕ್ಕಿದೆ, ಅದನ್ನು ಮಾಡಿಕೊಳ್ಳಲಿ. ಯಾರ ಬಗ್ಗೆಯೂ ಹೆಚ್ಚು ಹೇಳುವುದಿಲ್ಲ, ಗೃಹ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಹಿರಿಯರಿದ್ದಾರೆ. ನಮ್ಮ ಪೊಲೀಸರ ಕೈ ಮೇಲಾಗಲಿದೆ. ಕೃತ್ಯದಲ್ಲಿ ಭಾಗಿಯಾದವರಿಗೆ ಶಿಕ್ಷೆ ಖಂಡಿತ ಆಗಲಿದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.
ಇದನ್ನೂ ಒದಿ: ಮೈಸೂರಿನಲ್ಲಿ ಗ್ಯಾಂಗ್ ರೇಪ್ ಮಾಡಿದವರನ್ನು ಗಲ್ಲಿಗೇರಿಸಬೇಕು: ಬಸನಗೌಡ ಪಾಟೀಲ್ ಯತ್ನಾಳ್
ಸಿಎಂ ಬೊಮ್ಮಾಯಿ ಸರ್ಕಾರ ಎಲ್ಲರ ಮಾನ ಪ್ರಾಣ ಕಾಪಾಡುವ ಬದ್ಧತೆ ಹೊಂದಿದೆ. ಯಾರೂ ಕೂಡ ಈ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಯುವಕ ಹಾಗೂ ಯುವತಿಯು ಆಘಾತದಿಂದ ಇನ್ನೂ ಹೊರ ಬರುತ್ತಿಲ್ಲ. ಮೈಸೂರಿನ ಪೊಲೀಸರು ಹಾಗೂ ಬೆಂಗಳೂರಿನಿಂದ ತೆರಳಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಗೃಹ ಸಚಿವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Mysore Gangrape Case: ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹೋಗಬಾರದಿತ್ತು ಅಂತ ಹೇಳಿಲ್ಲ ಎಂದ ಗೃಹ ಸಚಿವ ಜ್ಞಾನೇಂದ್ರ!