ಬೆಂಗಳೂರು: ರಾಜ್ಯ ಪೊಲೀಸ್ ಸಿಬ್ಬಂದಿಗೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ, ಪೊಲೀಸರ ಕಾರ್ಯ ವಿಧಾನದಲ್ಲಿ ರಾಜ್ಯ ಸರ್ಕಾರ ಬದಲಾವಣೆ ತಂದಿದೆ.
ಫ್ರಂಟ್ಲೈನ್ನಲ್ಲಿ ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಪೊಲೀಸರು ದಿನೇ ದಿನೆ ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸ್ ಕಾರ್ಯಶೈಲಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬದಲಾವಣೆ ತಂದಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಆರೋಗ್ಯ ಭಾಗ್ಯದಡಿಯಲ್ಲಿ ಹಣವನ್ನು ಎಲ್ಲಾ ನಿಯೋಜಿತ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿ ಪೊಲೀಸ್ ಸಿಬ್ಬಂದಿಗೆ, ಪ್ರತ್ಯೇಕ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡುವುದು. ಠಾಣೆಗಳಲ್ಲಿ ಕೋವಿಡ್-19 ಹರಡುವುದರಿಂದ ಅವಶ್ಯಕತೆಯಿರುವ ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ದೂರುಗಳನ್ನು ಆನ್ಲೈನ್ನಲ್ಲಿ ಸ್ವೀಕರಿಸಿ ಅದರ ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ.
50 ವರ್ಷ ಮೇಲ್ಪಟ್ಟ ಸಿಬ್ಬಂದಿ ವರ್ಕ್ ಫ್ರಂ ಹೋಮ್ ಮಾಡಬೇಕು. ಠಾಣೆಯಲ್ಲಿ ಕೆಲಸ ಮುಗಿದ ಮೇಲೆ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು. ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡಲಾಗುವುದು. ಠಾಣೆ ಮುಂಭಾಗ ಗಾಜಿನ ಪರದೆ ಹಾಕಿ ಸಾರ್ವಜನಿಕರನ್ನು ಮಾತನಾಡಿಸುವುದು. ಕೋವಿಡ್ ಆಸ್ಪತ್ರೆ ಹಾಗೂ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕಡ್ಡಾಯವಾಗಿ ಪಿಪಿಇ ಕಿಟ್, ಮಾಸ್ಕ್ ಹೆಡ್ ಗೀಯರ್ ನೀಡುವುದು ಹಾಗೂ ಪೊಲೀಸ್ ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಿಕ್ ಔಷಧಿಗಳನ್ನ ನೀಡುವುದು. ಈ ಎಲ್ಲಾ ಅಂಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಬೊಮ್ಮಾಯಿ ಸೂಚನೆ ನೀಡಿದ್ದಾರೆ.