ಬೆಂಗಳೂರು: ರಾಜ್ಯದಲ್ಲಿ ಮತ್ತೆ ದೂರವಾಣಿ ಕದ್ದಾಲಿಕೆ ವಿಷಯ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದು ಅನುಮಾನಕ್ಕೆ ಪುಷ್ಠಿ ನೀಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಸಂತೋಷ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪಕ್ಷ ಸಂಘಟನೆ, ಗಣೇಶ ಹಬ್ಬಕ್ಕೆ ಕೈಗೊಂಡ ಕ್ರಮಗಳು, ಕಾನೂನು ಜಾರಿ ಹಾಗೂ ನಿರ್ಬಂಧದ ಬಗ್ಗೆ ಮಾಹಿತಿ ನೀಡಿದ್ದೇನೆ. ಕಾನೂನು-ಸುವ್ಯವಸ್ಥೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ. ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿನ ಪಕ್ಷ ಸಂಘಟನೆ ಹಾಗೂ ಪಕ್ಷದ ಜಿಲ್ಲಾ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದೇನೆ ಎಂದರು.
ಟೆಲಿಫೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತು ಡಿ.ಕೆ.ಶಿವಕುಮಾರ್ ಮಾಡಿದ ಆರೋಪದ ಚರ್ಚೆ ಕುರಿತು ಮಾಹಿತಿ ನೀಡಲು ನಿರಾಕರಿಸಿದ ಗೃಹ ಸಚಿವರು, ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿದೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎನ್ನುತ್ತಾ ನಿರ್ಗಮಿಸಿದರು.
ಬಿ.ಎಲ್.ಸಂತೋಷ್ ಜೊತೆಗಿನ ಭೇಟಿ ಬಗ್ಗೆ ಗುಟ್ಟು ಬಿಟ್ಟುಕೊಡದ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ. ಇಂದಿನ ಭೇಟಿ ಬಗ್ಗೆ ಮಾಹಿತಿ ನೀಡಿ ಎಂದರೆ ಯಾರ ಭೇಟಿ? ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಕೇಳಿದರು. ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದೀರಲ್ಲಾ, ಅದರ ಬಗ್ಗೆ ಎಂದು ಹೇಳಿದ ನಂತರವೇ ಗೃಹ ಸಚಿವರು ಸಾಂಕೇತಿಕ ಎನ್ನುವ ರೀತಿಯ ಉತ್ತರ ನೀಡಿದರು. ಖಚಿತ ಉತ್ತರ ನೀಡದೇ ನುಣುಚಿಕೊಂಡಿದ್ದು ಸಂತೋಷ್ ಭೇಟಿಯ ಬಗ್ಗೆ ಕುತೂಹಲ ಕೆರಳಿಸುವಂತೆ ಮಾಡಿದೆ.