ಬೆಂಗಳೂರು: ಸುಪ್ರೀಂಕೊರ್ಟ್ನಿಂದ ಐತಿಹಾಸಿಕ ತೀರ್ಪು ನಿರೀಕ್ಷೆ ಮಾಡಿದ್ದೆವು. ಆದರೆ ನಿರಾಸೆ ಆಗಿದೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಅನರ್ಹ ಶಾಸಕರ ಕುರಿತು ಸುಪ್ರೀಂಕೊರ್ಟ್ ನೀಡಿದ ತೀರ್ಪಿನ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷಾಂತರ ಪಿಡುಗನ್ನ ಬುಡ ಸಹಿತ ಕಿತ್ತು ಹಾಕುವ ಐತಿಹಾಸಿಕ ತೀರ್ಪಿನ ನಿರೀಕ್ಷೆಯಲ್ಲಿ ಇದ್ದವರಿಗೆ ಸುಪ್ರೀಂ ತೀರ್ಪು ನಿರಾಸೆ ಮೂಡಿಸಿದೆ. ಸುಪ್ರೀಂ ತೀರ್ಪಿಗೆ ತಲೆಬಾಗುತ್ತೇನೆ. ಅನರ್ಹರು ತಪ್ಪಿತಸ್ಥರು ಎಂದು ಸುಪ್ರೀಂ ಹೇಳಿದೆ. ಆದರೆ, ಶಿಕ್ಷೆ ಕೊಟ್ಟಿಲ್ಲ ಎಂದರು.
ಕುದುರೆ ವ್ಯಾಪಾರದ ಬಗ್ಗೆ ಸುಪ್ರೀಂ ಆತಂಕ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಪಾತ್ರ ಏನು ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿದೆ. ಅನೈತಿಕತೆ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಈ ಮೂಲಕ ತೀರ್ಪಿಗೆ ಅವರು ಗೌರವ ಕೊಡಬೇಕು ಎಂದು ಆಗ್ರಹಿಸಿದರು.