ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ನಿಂದ ನಡೆಸಿದ ಅಧ್ಯಯನ ತಂಡದ ಮಧ್ಯಂತರ ವರದಿಯನ್ನು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ರಿಲೀಸ್ ಮಾಡಿದ್ರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಕೆ. ಪಾಟೀಲ್, ಅತಿವೃಷ್ಟಿ ಹಾನಿ ಅಧ್ಯಯನಕ್ಕೆ ರಾಜ್ಯ ಕಾಂಗ್ರೆಸ್ನಿಂದ ಪ್ರತ್ಯೇಕ ತಂಡ ರಚಿಸಲಾಗಿತ್ತು. ಹೀಗೆ ರಚನೆಯಾದ ಒಂದು ತಂಡದ ನೇತೃತ್ವವನ್ನು ನನಗೆ ವಹಿಸಲಾಗಿತ್ತು. ಬೆಳಗಾವಿ, ಅಥಣಿ, ನಿಪ್ಪಾಣಿ, ರೋಣ, ಗೋಕಾಕ್, ಹಾವೇರಿ, ಹಾನಗಲ್ ಹಾಗು ಶಿರಸಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಕಷ್ಟನಷ್ಟದ ಅಧ್ಯಯನ ಮಾಡಿರುವುದಾಗಿ ಹೇಳಿದ್ರು.
ವರದಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ನದಿಗಳಿಗೆ ಹೆಚ್ಚಿನ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದ್ದು, ಸಾಕಷ್ಟು ಹಾನಿಯಾಗಿದೆ. ನದಿ ನೀರಲ್ಲಿ ಹಲವು ಗ್ರಾಮಗಳು ಕೊಚ್ಚಿ ಹೋಗಿವೆ. ಇನ್ನೂ ಕೆಲ ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಘಟಪ್ರಭೆಯಿಂದ ಮುಧೋಳ ನಗರ ಭಾಗಶಃ ಹಾನಿಯಾಗಿದೆ. ಗೋಕಾಕ್ ಭಾಗದಲ್ಲೂ ಸಾಕಷ್ಟು ತೊಂದರೆಯಾಗಿದೆ. ಜಮಖಂಡಿಯಲ್ಲಿ ಕೃಷ್ಣೆಯ ಆರ್ಭಟಕ್ಕೆ ಜನ ಜಾನುವಾರುಗಳು, ಮನೆ-ಮಠಗಳು ನೀರು ಪಾಲಾಗಿವೆ ಎಂದು ಮಾಹಿತಿ ನೀಡಿದರು.
ನಾವು ಭೇಟಿ ಕೊಟ್ಟ ಎಲ್ಲಾ ಪ್ರದೇಶಗಳ ಸಮಗ್ರ ವರದಿ ತಯಾರಿಸಿದ್ದೇವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ರವಾನಿಸಿದ್ದೇವೆ. ಇದೀಗ ತಾಂತ್ರಿಕವಾಗಿ ವರದಿ ಹಸ್ತಾಂತರಿಸಲಾಗಿದೆ. ಸುಮಾರು 22 ಲಕ್ಷ ಹೆಕ್ಟೇರ್ ಕಬ್ಬಿನ ಬೆಳೆಗೆ ಹಾನಿಯಾಗಿದೆ. 1 ಲಕ್ಷ ಎಕರೆ ಭೂಮಿ ಉಪಯೋಗಕ್ಕೆ ಬಾರದಂತಾಗಿದೆ. 2 ಲಕ್ಷ ಮನೆಗಳು ನೆಲಕ್ಕುರುಳಿವೆ. ಸುಮಾರು 100 ಜೀವಹಾನಿಯಾಗಿದೆ. ಶಾಲಾ ಕಟ್ಟಡ, ಸೇತುವೆ, ರಸ್ತೆಗಳು ಹಾನಿಗೀಡಾಗಿವೆ ಎಂದು ಪ್ರವಾಹದ ಪರಿಣಾಮವನ್ನು ವಿವರಿಸಿದರು.
ಐವತ್ತು ವರ್ಷಗಳಲ್ಲಿ ನಾವು ಇಂತಹ ಪರಿಸ್ಥಿತಿ ನೋಡಿಲ್ಲ. ಉಳ್ಳವರು ಪರಿಹಾರ ಕೇಂದ್ರದ ಪಾಲಾಗಿದ್ದಾರೆ. ಯಾವುದೇ ಕೇಂದ್ರಕ್ಕೆ ಹೋದರೂ ಅಲ್ಲಿ ಸರ್ಕಾರಕ್ಕಿಂತ ಜನರೇ ನೆರವು ನೀಡಿದ್ದಾರೆ. ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬರಲೇ ಇಲ್ಲ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ಹೋದ್ರು. ಆದರೆ ಯಾವುದೇ ಭರವಸೆ ನೀಡದೇ ವಾಪಾಸ್ಸಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಕರ್ನಾಟಕವನ್ನು ಅಸಡ್ಡೆಯಿಂದ ನೋಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸಮಿತಿಯ 25 ಶಿಫಾರಸ್ಸುಗಳನ್ನು ಮಾಡಿದ್ದು, ಪ್ರವಾಹ ಹಾಗೂ ಮಳೆಯಿಂದಾಗಿ ಭಾರೀ ಹಾನಿ ಹಾಗೂ ಜನರ ಬದುಕಿಗೆ ಸಂಕಷ್ಟ ತಂದ ಈ ಸ್ಥಿತಿಯನ್ನು “ರಾಷ್ಟ್ರೀಯ ವಿಪತ್ತು ” ಎಂದು ತಕ್ಷಣವೇ ಘೋಷಿಸಬೇಕು. ಪ್ರವಾಹ ಪರಿಹಾರಕ್ಕಾಗಿ ಕೂಡಲೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ರಾಷ್ಟ್ರೀಯ ವಿಪತ್ತಿನ ಮಟ್ಟದ ಅನುದಾನ, ಸಹಾಯ, ಸೌಲಭ್ಯ, ಸೌಕರ್ಯ ಒದಗಿಸಬೇಕೆಂದು ಕೇಂದ್ರ ಸರ್ಕಾರವನ್ನು ಹೆಚ್.ಕೆ. ಪಾಟೀಲ್ ಒತ್ತಾಯಿಸಿದರು.
ತಮ್ಮ ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರಿದ್ದರೂ ಪ್ರವಾಹ ಸಂತ್ರಸ್ತ ಪ್ರದಶಗಳಿಗೆ ಏಕೆ ಭೇಟಿ ನೀಡಲಿಲ್ಲ. ನಿಮಗೆ ರಾಜ್ಯದ ಬಗ್ಗೆ ತಾತ್ಸಾರವೇ? ಎಂದು ಪ್ರಶ್ನಿಸಿದ ಅವರು, ಕೂಡಲೇ ಅಗತ್ಯ ವಸ್ತುಗಳನ್ನು ಜನರಿಗೆ ಒದಗಿಸಬೇಕು.
ಪ್ರವಾಹ ಇಳಿದರೂ ನಿಮ್ಮ ಸಂಪುಟ ಗೊಂದಲ ಮುಗಿಯಲಿಲ್ವೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಎಲ್ಲಿದೆ ಅಂತಾನೇ ಗೊತ್ತಿಲ್ಲ. ಒಂದೇ ಒಂದು ಪರಿಹಾರ ಕೇಂದ್ರ ಸರ್ಕಾರದ್ದಿದೆಯೇ ತೋರಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಈ ವೇಳೆ ಮಾಜಿ ಸಚಿವರಾದ ಶಿವಾನಂದ ಪಾಟೀಲ್, ಉಮಾಶ್ರೀ, ಆರ್.ಬಿ.ತಿಮ್ಮಾಪುರ ಮತ್ತಿತರರು ಉಪಸ್ಥಿತರಿದ್ದರು.