ಬೆಂಗಳೂರು: ಯಾವ ಕ್ಷೇತ್ರಕ್ಕೂ ನಿರೀಕ್ಷಿತ ಅನುದಾನ ಬಿಡುಗಡೆಯಾಗಿಲ್ಲ. ಪ್ರತಿ ಶಾಸಕರಿಗೆ ವಾರ್ಷಿಕ 2 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಈ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಓದಿ: 'ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರವಾಹ, ಬರ, ಕೊರೊನಾ ಎದುರಾದವು'
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾತನಾಡಿದ ಅವರು, ಕಳೆದ ವರ್ಷ ಒಂದು ಕೋಟಿ ರೂ.ಗೆ ಕ್ರಿಯಾ ಯೋಜನೆ ಕೇಳಿದ್ದರು. ನಾವು ಕೂಡ ಕ್ರಿಯಾಯೋಜನೆ ಕೊಡಲಾಗಿದ್ದು, ಆದರೆ, 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಆಡಳಿತಾರೂಢ ಬಿಜೆಪಿ ಶಾಸಕರೂ ಸಹ ಅಭಿವೃದ್ಧಿ ಹಿನ್ನೆಲೆಯಲ್ಲಿ, ಅನುದಾನ ಕೊರತೆ ಬಗ್ಗೆ ಆರೋಪ ಮಾಡಿದ್ದಾರೆ. ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಪಾಡೇನು? ಎಂದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ 150 ಕೋಟಿ ರೂ. ನೀಡಲಾಗಿತ್ತು. ಟೆಂಡರ್ ಪ್ರಕ್ರಿಯೆ ನಡೆದಿರುವ ಯೋಜನೆ, ಕಾರ್ಯಗಳ ಅನುದಾನವೂ ಬಿಡುಗಡೆಯಾಗಿಲ್ಲ. ಈಗ ಬಿಡುಗಡೆ ಮಾಡಿರುವ 50 ಲಕ್ಷ ರೂ. ಮೊದಲು ಜಿಲ್ಲಾಧಿಕಾರಿಗಳ ಖಾತೆಗೆ ಬರಬೇಕಿದೆ ಎಂದು ಹೇಳಿದರು.
ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವ ಹಂತ ತಲುಪಿದೆ. ಈ ಹಂತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲವಂತವಾಗಿ ಶುಲ್ಕ ವಸೂಲಿ ಮಾಡಬಾರದು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉದಾರತೆ ತೋರಬೇಕು ಎಂದರು.
ಬಹಿರಂಗ ಹೇಳಿಕೆ ನೀಡಬಾರದು:
ಪಕ್ಷದ ಶಾಸಕರು ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದ ಅವರು, ಇಂದಿನ ಸಭೆಗೆ ಎಲ್ಲ ಶಾಸಕರಿಗೂ ಆಹ್ವಾನ ನೀಡಿದ್ದೇನೆ. ಪಕ್ಷದ ನಿಷ್ಠಾವಂತರು ಸಭೆಗೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಅಂತಹವರ ಮೇಲೆ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಸರ್ಕಾರ ಎಲ್ಲಿ ಟೇಕಾಫ್ ಆಗಿದೆ, ಎಲ್ಲಿ ನಿಂತಿದೆ ಎಂಬುದನ್ನು ಸಿಎಂ ಹೇಳಬೇಕು ಎಂದು ಟೀಕಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ 2 ಕೋಟಿ ರೂ. ಅನುದಾನವೇ ಬಂದಿಲ್ಲ. ಈಗ 50 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವಧಿಯ ಕಾಮಗಾರಿಗಳನ್ನೇ ಇನ್ನೂ ಆರಂಭಿಸಿಲ್ಲ ಎಂದು ಆಡಳಿತಾರೂಢ ಶಾಸಕರು ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.