ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಹೈಕೋರ್ಟ್ ಕಲಾಪವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವಾಗ ಅನಗತ್ಯ ‘ಚಾಟಿಂಗ್’ ಮಾಡಿದ್ದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು, ಕೋರ್ಟ್ ವಿಚಾರಣೆ ವೇಳೆ ವಿದ್ಯಾರ್ಥಿಗಳು ಸಭ್ಯತೆ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
2022ನೇ ಸಾಲಿನಲ್ಲಿ ನಡೆದ ಎಂಬಿಬಿಎಸ್ ಪದವಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆರ್‌ಜಿಯುಎಚ್‌ಎಸ್ ಸಲ್ಲಿಸಿದ್ದ ತಕರಾರು ಮೇಲ್ಮನವಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಅಲ್ಲದೇ, ಜೂಮ್ ಆ್ಯಪ್ ಮೂಲಕ ಕೋರ್ಟ್ ವಿಚಾರಣೆ ಪ್ರಸಾರ ಮಾಡಲಾಗುತ್ತಿತ್ತು. ಹಲವು ವಿದ್ಯಾರ್ಥಿಗಳು (ಮೇಲ್ಮನವಿಯಲ್ಲಿ ಪಕ್ಷಕಾರರು ಆಗಿರುವ) ಜ್ಯೂಮ್ ಆ್ಯಪ್ ಮೂಲಕ ನ್ಯಾಯಾಲಯದ ಕಲಾಪವನ್ನು ವೀಕ್ಷಿಸುತ್ತಾ, ಅತ್ಯಂತ ಕಾತುರದಿಂದ ವಿಚಾರಣೆಗೆ ಕಾಯುತ್ತಿದ್ದರು.
ಈ ವೇಳೆ ಕೆಲ ವಿದ್ಯಾರ್ಥಿಗಳು ಆಡಿಯೋ ಮ್ಯೂಟ್ ಮಾಡಿಕೊಳ್ಳದೆ ಮಾತನಾಡುತ್ತಿದ್ದರು. ಆಗ ಕೋರ್ಟ್ ಅಧಿಕಾರಿಯು ಆಡಿಯೋ ಮ್ಯೂಟ್ ಮಾಡಿಕೊಳ್ಳುವಂತೆ ಹಲವು ಬಾರಿ ವಿದ್ಯಾರ್ಥಿಗಳ ಗಮನಕ್ಕೆ ತಂದರು. ಅದಾದ ಬಳಿಕ ನಮ್ಮ ಅರ್ಜಿ ಯಾವಾಗ ವಿಚಾರಣೆಗೆ ಬರಲಿದೆ?, ಪ್ರಸ್ತುತ ಎಷ್ಟನೇ ಪ್ರಕರಣ ನಡೆಯುತ್ತಿದೆ. ‘ಒಂದು ಪ್ರಕರಣದ ವಿಚಾರಣೆ ಮುಗಿಸಲು ಎಷ್ಟು ಸಮಯ ಬೇಕಾಗುತ್ತದೆ?’ ಎಂದು ಕೆಲ ವಿದ್ಯಾರ್ಥಿಗಳೂ ಚಾಟ್ ಬಾಕ್ಸ್ನಲ್ಲಿ ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ಮತ್ತೊಂದಷ್ಟು ವಿದ್ಯಾರ್ಥಿಗಳು ಕಮೆಂಟ್ ಮಾಡುತ್ತಿದ್ದರು. ಇದು ಇತರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಇದರಿಂದ ಬೇಸತ್ತ ಕೋರ್ಟ್ ಅಧಿಕಾರಿ, ‘ವಿದ್ಯಾರ್ಥಿಗಳೇ, ನ್ಯಾಯಾಲಯದ ಮೇಲೆ ಕಮೆಂಟ್ ಮಾಡುವ ಮುನ್ನ ಯೋಚನೆ ಮಾಡಬೇಕು. ನೀವು ನ್ಯಾಯಾಲಯದ ಮುಂದೆ ಇದ್ದೀರಿಯೇ ಹೊರತು ನಿಮ್ಮ ಕಾಲೇಜಿನಲ್ಲಿ ಅಲ್ಲ’ ಎಂದು ಕಟುವಾಗಿ ಉತ್ತರಿಸಿ ಎಚ್ಚರಿಸಿದರು. ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಪೀಠದ ಮುಂದೆ ಆರ್‌ಜಿಯುಎಚ್‌ಎಸ್ ಮೇಲ್ಮನವಿ ವಿಚಾರಣೆಗೆ ಬಂದಿತ್ತು. ಈ ವೇಳೆ, ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಂದೇಶ ಕಳುಹಿಸಿದ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಕೋರ್ಟ್ ಅಧಿಕಾರಿ ತಂದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಪರ ಹಾಜರಿದ್ದ ವಕೀಲರಲ್ಲಿ ಬೇಸರ ವ್ಯಕ್ತಪಡಿಸಿದರು.
ಸಾಕಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕಲಾಪಕ್ಕೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹೀಗೆ ಪದೇ ಪದೇ ಸಂದೇಶ ಕಳುಹಿಸುತ್ತಲೇ ಇದ್ದರೆ, ಕೋರ್ಟ್ ಅಧಿಕಾರಿಯು ಹೇಗೆ ಮತ್ತು ಎಷ್ಟು ಜನರಿಗೆ ಉತ್ತರಿಸಲು ಸಾಧ್ಯ. ನೀವೇ ನೋಡಿ. ವಿದ್ಯಾರ್ಥಿಗಳು ಹೇಗೆಲ್ಲಾ ಸಂದೇಶ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಕಾತುರ ಹಾಗೂ ಕಳವಳವನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳುತ್ತದೆ. ಅಂದ ಮಾತ್ರಕ್ಕೆ ಇತರ ಪ್ರಕರಣಗಳನ್ನು ಪಟ್ಟಕ್ಕಿಟ್ಟು ಮೊದಲಿಗೆ ನಿಮ್ಮ ಪ್ರಕರಣದ ವಿಚಾರಣೆ ನಡೆಸಬೇಕೆ? ಎಂದು ವಕೀಲರನ್ನು ಪ್ರಶ್ನಿಸಿದರು.
ಅಲ್ಲದೇ, ‘ಕೋರ್ಟ್ ಕಲಾಪ ವೀಕ್ಷಣೆ ಮಾಡುತ್ತಿರುವಾಗ ವಿದ್ಯಾರ್ಥಿಗಳ ಸಭ್ಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ಹೇಗಿರುತ್ತದೆ? ಕೋರ್ಟ್ ಶಿಷ್ಟಾಚಾರವೇನು? ಕೋರ್ಟ್ ಮುಂದೆ ಇರುವಾಗ ಹೇಗೆ ವರ್ತಿಸಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಕಾಲೇಜಿನಲ್ಲಿ ವರ್ತಿಸಿದಂತೆ ನ್ಯಾಯಾಲಯದ ಮುಂದೆ ನಡೆದುಕೊಳ್ಳಬಾರದು. ಬಹಳ ಎಚ್ಚರದಿಂದ ಇರಬೇಕಾಗುತ್ತದೆ’ ಎಂದು ಮೌಖಿಕವಾಗಿ ಸೂಚಿಸಿದರು.
ಈ ವೇಳೆ, ವಿದ್ಯಾರ್ಥಿಗಳ ಮೆಸೇಜ್ ಮತ್ತವರ ಹೆಸರು ಪರಿಶೀಲಿಸಿದ ವಕೀಲರು, ಈ ವಿದ್ಯಾರ್ಥಿಗಳು ತಮ್ಮ ಪಕ್ಷಕಾರರು ಅಲ್ಲ. ಆದರೂ, ನ್ಯಾಯಾಲಯದ ಸೂಚನೆಯನ್ನು ತಮ್ಮ ಪಕ್ಷಕಾರರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಅಂತಿಮವಾಗಿ ಮೇಲ್ಮನವಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30 ಕ್ಕೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು.
ಇದನ್ನೂ ಓದಿ: ಜನಪ್ರತಿನಿಧಿಗಳ ವಿಪ್ ಉಲ್ಲಂಘನೆ ಪ್ರಕರಣ: ಸೂಕ್ತ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ