ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 22 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಹೊಂದಾಣಿಕೆ ಕಂಡುಬಂದಿಲ್ಲ ಎಂಬ ಅಂಶವನ್ನು ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಕೈ-ತೆನೆ ಮೈತ್ರಿಗೆ ಕೊನೆ ಮೊಳೆ ಹೊಡೆಯುವ ಕಾರ್ಯ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಮಿತಿಯ ಮುಖ್ಯಸ್ಥ ವಿ.ಆರ್.ಸುದರ್ಶನ್ ವರದಿ ಸಲ್ಲಿಕೆ ಮಾಡಿದರು. ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಸೋಲಾಯಿತು ಎಂಬ ಅಂಶದ ಜೊತೆಗೆ ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎದುರಾದ ಹಿನ್ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಅಲ್ಲ ಎನ್ನುವ ಅಂಶವನ್ನು ಕೂಡ ಬಿಂಬಿಸಲಾಗಿದೆ.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿ ಕುರಿತು ಜನರಿಗೆ ಮನದಟ್ಟು ಮಾಡುವಲ್ಲಿ ಸಿದ್ದರಾಮಯ್ಯ ವಿಫಲವಾಗಿರುವುದು ಸೋಲಿಗೆ ಕಾರಣ ಎಂದು ಬಿಂಬಿಸಲಾಗಿತ್ತು.
ವರದಿಯ ಪ್ರಮುಖಾಂಶ:
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಗೊಂದಲಗಳನ್ನ ಜನ ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಚುನಾವಣೆಗಳಲ್ಲಿ ಮೈತ್ರಿ ನಡೆಸಬಾರದು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳ ರೀತಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸುವಲ್ಲಿ ಕಾಂಗ್ರೆಸ್, ಜೆಡಿಎಸ್ ವಿಫಲವಾಗಿವೆ. ಮುಂದಿನ ಚುನಾವಣೆ ವೇಳೆಗೆ ರಾಹುಲ್ ಗಾಂಧಿ ಅವರು ಪರಿಣಾಮಕಾರಿ ಗಟ್ಟಿ ನಾಯಕತ್ವವನ್ನ ರೂಪಿಸಿಕೊಳ್ಳಬೇಕು ಎಂದು ವಿವರಿಸಲಾಗಿದೆ.
ಕಚೇರಿ ಬಲಗೊಳ್ಳಲಿ:
ಜಿಲ್ಲಾ, ಬ್ಲಾಕ್, ರಾಜ್ಯ ಕಾಂಗ್ರೆಸ್ ಸಮಿತಿ ಕಚೇರಿ ಬಲಪಡಿಸಲು ಕಡ್ಡಾಯ ದೇಣಿಗೆ ಕೊಡಬೇಕು. ಶಾಸಕರು, ಸಂಸದರು ಪ್ರತಿ ತಿಂಗಳು ಕೆಪಿಸಿಸಿಗೆ 5,000 ರೂ., ಜಿಲ್ಲಾ ಕಾಂಗ್ರೆಸ್ಗೆ 4,000 ರೂ., ಬ್ಲಾಕ್ ಕಾಂಗ್ರೆಸ್ಗೆ 3,000 ರೂ. ಕೊಡುವುದು ಕಡ್ಡಾಯ. ಸರ್ಕಾರದ ವಿವಿಧ ಚುನಾಯಿತ ಹಾಗೂ ನೇಮಕಾತಿ ಹುದ್ದೆಯಲ್ಲಿ ಇರುವವರು ಪ್ರತಿ ತಿಂಗಳು ತಲಾ 3,000, 2,000, 1,000 ದೇಣಿಗೆ ನೀಡುವುದು ಕಡ್ಡಾಯ. ಪಕ್ಷದ ಸದಸ್ಯತ್ವ ನೊಂದಣಿಗೆ ಆನಲೈನ್ ಕಾರ್ಯಕ್ರಮ ರೂಪಿಸಿ. ಒಂದೇ ಕುಟುಂಬದ ಇಬ್ಬರಿಗೆ, ಮೂವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಕ್ಕೆ ಕಾರ್ಯಕರ್ತರಲ್ಲಿ ಆಕ್ರೋಶವಿದೆ. ಏಕಾಏಕಿ ನಿವೃತ್ತ ಸರ್ಕಾರಿ ಅಧಿಕಾರಿಗಳನ್ನ ಪಕ್ಷದ ಅಭ್ಯರ್ಥಿ ಮಾಡುವುದರ ಬಗ್ಗೆ ಅಸಮಾಧಾನವಿದೆ ಎಂದು ತಿಳಿಸಲಾಗಿದೆ.
ಸ್ಪೀಕರ್ ಕ್ರಮಕ್ಕೆ ಮೆಚ್ಚುಗೆ:
ಪಕ್ಷ ಬಿಟ್ಟು ಹೋದ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮಕ್ಕೆ ಸಮಿತಿ ವರದಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಅಬ್ಬರ ಪ್ರಚಾರ ತಡೆಯಲು ಕೈ ನಾಯಕರು ವಿಫಲರಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಸಂಘಟಿತ ಹೋರಾಟ ಮಾಡಲಿಲ್ಲ. ಕೆಲವು ನಾಯಕರು ರಿಪಬ್ಲಿಕ್ ಧೋರಣೆ ತೋರಿಸುತ್ತಿರುವುದು ಪಕ್ಷಕ್ಕೆ ಹೊಡೆತ ಕೊಟ್ಟಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆದಿದೆ. ಧರ್ಮ ಒಡೆದರು ಎಂಬ ಅಪಪ್ರಚಾರ ತಡೆಗಟ್ಟಲು ಕಾಂಗ್ರೆಸ್ ವಿಫಲವಾಗಿದೆ ಎಂದು ತಿಳಿಸಲಾಗಿದೆ.
63 ಪುಟಗಳ ವರದಿ:
63 ಪುಟಗಳ, 26 ವಿಷಯಗಳನ್ನ ಆಧರಿಸಿ ವರದಿ ರೆಡಿಯಾಗಿದೆ. 56 ಅಸೆಂಬ್ಲಿಗಳಲ್ಲಿ ಹಿನ್ನಡೆ ಅನುಭವಿಸಿದ ಅಂಶವಿದೆ. 2018ರ ಸೋಲಿಗೆ ಕಾರಣಗಳ ಪಟ್ಟಿಯೇ ವರದಿಯಲ್ಲಿದೆ. ಪಕ್ಷ ಸಂಘಟನೆ, ಕುಟುಂಬ ರಾಜಕಾರಣ, ಅಧಿಕಾರಿಗಳನ್ನ ಕಣಕ್ಕಿಳಿಸಿದ್ದು, ಸ್ಥಳೀಯ ಮಟ್ಟದ ಹೊಂದಾಣಿಕೆ ಕೊರತೆ ಈ ಎಲ್ಲಾ ಅಂಶಗಳನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ಪಕ್ಷ ಮುನ್ನಡೆಗೆ ಬೇಕಾದ ಕಾರಣ ವರದಿಯಲ್ಲಿದೆ.