ಬೆಂಗಳೂರು: ಜನವರಿ 15ರಿಂದ ಎಲ್ಲಾ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಆಫ್‌ಲೈನ್ ತರಗತಿಗಳು ಆರಂಭವಾಗುತ್ತಿರುವುದರಿಂದ ಹೊಸ ಎಸ್‌ಒಪಿ ಜಾರಿ ಮಾಡಲಾಗಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ಕಾರಣಕ್ಕೂ ಈ ಮಾರ್ಗಸೂಚಿ ಮೀರುವಂತಿಲ್ಲ. ಶಿಕ್ಷಣ ಸಂಸ್ಥೆಗಳ ಜತೆಗೆ, ವಿದ್ಯಾರ್ಥಿಗಳು ಕೂಡ ಪಾಲಿಸಬೇಕು. ವಿದ್ಯಾರ್ಥಿಗಳು ನೇರ ತರಗತಿಗಳಿಗೂ ಹಾಜರಾಗಬಹುದು, ಆನ್‌ಲೈನ್ ತರಗತಿಗೂ ಹಾಜರಾಗಬಹದು. ಆ ಆಯ್ಕೆ ವಿದ್ಯಾರ್ಥಿಗಳಿಗೇ ಇರುತ್ತದೆ. ಎರಡರಲ್ಲಿ ಒಂದಕ್ಕೆ ಹಾಜರಾತಿ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಎಸ್‌ಒಪಿಯಲ್ಲಿ ಏನೇನಿದೆ?
ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಈ ಪತ್ರ ತರದಿದ್ದರೆ ಆಫ್ ಲೈನ್ ತರಗತಿಗಳಿಗೆ ಪ್ರವೇಶ ಇರುವುದಿಲ್ಲ.
ಮಾರ್ಗಸೂಚಿಯಂತೆ ಆಫ್‌ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿಯಮಗಳನ್ನು ಮೀರುವಂತಿಲ್ಲ. ದೈಹಿಕ ಅಂತರ ಕಡ್ಡಾಯ. ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧ ಮಾಡಿಕೊಳ್ಳಬೇಕು.
ಬೋಧನಾ, ಪ್ರಾಕ್ಟಿಕಲ್, ಪ್ರಾಜೆಕ್ಟ್ ತರಗತಿಗಳನ್ನು ಅಗತ್ಯಬಿದ್ದರೆ ಪಾಳಿ ಆಧಾರದಲ್ಲಿ ಮಾಡಬಹುದು.
ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಬಹುದು. ಇಂಥ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಇರುವ ಅನುಮಾನ, ಗೊಂದಲಗಳನ್ನು ನಿವಾರಿಸಲು ಪ್ರತಿದಿನ ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಬಹುದು. ಇಂಥ ಸಂಪರ್ಕ ತರಗತಿಗಳನ್ನು ನಡೆಸುವಾಗಲೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಪ್ರತಿ ಹಂತದಲ್ಲೂ ದೈಹಿಕ ಅಂತರ ಬಹಳ ಮುಖ್ಯವಾಗಿರುತ್ತದೆ.
ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಕಾಲ ಪ್ರತಿ ತರಗತಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಯನ್ನು ವಾಟ್ಸಪ್, ಇ ಮೇಲ್ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು. ಇದು ಕಡ್ಡಾಯ. ಜತೆಗೆ ವಿಡಿಯೋ ಪಾಠಗಳು, ಪವರ್ ಪಾಯಿಂಟ್ ಪ್ರೆಸೆಂಟೇಶನ್, ಇ-ಪುಸ್ತಕ, ಇ-ನೋಟ್ಸ್, ಆಡಿಯೋ ಪುಸ್ತಕ, ಅಭ್ಯಾಸ ಪ್ರಶ್ನೆಗಳನ್ನು ಇತ್ಯಾದಿ ಅಧ್ಯಯನ ಸಾಮಗ್ರಿಯನ್ನು ಕಡ್ಡಾಯವಾಗಿ ಕಾಲೇಜ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಇನ್ನು ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಆನ್ ಕ್ಯಾಂಪಸ್ ಮತ್ತು ಆಫ್ ಕ್ಯಾಂಪಸ್ ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳಬಹುದು.
ಎಂದಿನಂತೆ ತರಗತಿಗಳ ಆರಂಭಕ್ಕೆ ಮುನ್ನ ಕಾಲೇಜಿನ ಕಟ್ಟಡ, ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ, ಪೀಠೋಪಕರಣ ಹಾಗೂ ಆಧ್ಯಯನ ಪುಸ್ತಕಗಳನ್ನು ಸ್ಯಾನಿಟೈಸ್ ಮಾಡಬೇಕು. ಜತೆಗೆ, ದ್ವಾರದಲ್ಲಿಯೇ ಎಲ್ಲರ ಥರ್ಮಲ್ ಸ್ಕೀನಿಂಗ್ ಹಾಗೂ ಸ್ಯಾನಿಟೈಸ್ ವ್ಯವಸ್ಥೆ ಕಡ್ಡಾಯ.
ಗಮನಾರ್ಹ ಅಂಶವೆಂದರೆ ಎಲ್ಲಾ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕೋವಿಡ್-19 ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಆದರೆ ಕೋವಿಡ್ ಲಕ್ಷಣಗಳು ಇರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹತ್ತಿರದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಎಲ್ಲಾ ಕಾಲೇಜುಗಳು ಮ್ಯಾಪಿಂಗ್ ಮಾಡಿಕೊಳ್ಳಬೇಕು.
ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ. 50 ಮೀರುವಂತಿಲ್ಲ. ಒಂದು ಹಾಜರಾತಿ ಹೆಚ್ಚಿದರೆ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ನೇರ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಕಡ್ಡಾಯವಾಗಿ ಮನೆಯಿಂದಲೇ ಊಟ, ಕುಡಿಯುವ ನೀರು ತಂದುಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಕೂಡ ಕಡ್ಡಾಯ. ಬೋಧಕರಿಗೂ, ಇತರೆ ಎಲ್ಲಾ ಸಿಬ್ಬಂದಿಗೂ ಇದು ಅನ್ವಯವಾಗುತ್ತದೆ.
ಓದಿ: ಸಚಿವ ಸ್ಥಾನ ಕೈ ತಪ್ಪಿದ ಬೇಸರದಲ್ಲಿ ರೇಣುಕಾಚಾರ್ಯ: ಸಮಾಧಾನಪಡಿಸಲು ಬಿ.ವೈ.ರಾಘವೇಂದ್ರ ಭೇಟಿ?
ಲೈಬ್ರರಿ, ಕ್ಯಾಂಟೀನ್ ಆರಂಭಕ್ಕೆ ಅಡ್ಡಿ ಇಲ್ಲ. ಆದರೆ ಮಾರ್ಗಸೂಚಿ ಮೀರುವಂತಿಲ್ಲ. ಜತೆಗೆ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಚಟುವಟಿಕೆಗಳನ್ನು ಕೋವಿಡ್ ಮಾರ್ಗಸೂಚಿಯಂತೆ ಆರಂಭಿಸಬಹುದು.