ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಅಂಗನವಾಡಿಗಳಿಗೆ ವಿದ್ಯುತ್, ಫ್ಯಾನ್, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಇಲ್ಲದಿದ್ದಲ್ಲಿ ನ್ಯಾಯಾಲಯವೇ ಈ ಸಂಬಂಧ ಸೂಕ್ತ ಮಧ್ಯಂತರ ಆದೇಶ ನೀಡಲಿದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಚಾರವಾಗಿ ಬೆಳಗಾವಿಯ ವಿಮೋಚನಾ ಸಂಘದ ಮುಖ್ಯಸ್ಥ ಬಿ.ಎಲ್ ಪಾಟೀಲ್ 2011ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 14,948 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕವಿಲ್ಲ. 18,974 ಕೇಂದ್ರಗಳಿಗೆ ಫ್ಯಾನ್ಗಳಿಲ್ಲ. 13,690 ಕೇಂದ್ರಗಳಿಗೆ ಶೌಚಾಲಯಗಳಿಲ್ಲ. ಅಂಗನವಾಡಿಗಳ ಅಭಿವೃದ್ಧಿಗೆ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ, 8,300 ಕೇಂದ್ರಗಳಿಗೆ ಫ್ಯಾನ್ ಹಾಗೂ 354 ಕೇಂದ್ರಗಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಬಹುದು ಎಂದು ವಿವರಿಸಿದರು.
ಸರ್ಕಾರದ ವಿವರಣೆ ಆಲಿಸಿದ ಪೀಠ, ಶೇ.50ರಷ್ಟು ಅಂಗನವಾಡಿಗಳಲ್ಲಿ ಮೂಲ ಸೌಕರ್ಯ ಇಲ್ಲದ್ದನ್ನು ಗಮನಿಸಿತು. ಹಾಗೆಯೇ, ಕೂಡಲೇ ರಾಜ್ಯದ ಎಲ್ಲ ಅಂಗನವಾಡಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಿ. ಇಲ್ಲವಾದರೆ, ಈ ಕುರಿತು ನ್ಯಾಯಾಲಯವೇ ಸೂಕ್ತ ಮಧ್ಯಂತರ ಆದೇಶ ಹೊರಡಿಸಲಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಡೆಲ್ಟಾ ಪ್ಲಸ್.. ಇದ್ರಿಂದ ಬಚಾವ್ ಆಗ್ಬೇಕಿದ್ರೇ ಇಷ್ಟು ಮಾಡಿ ಸಾಕು..