ಬೆಂಗಳೂರು: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಸುತ್ತಲಿನ ಕ್ವಾರಿಗಳ ಪರವಾನಗಿ ರದ್ದುಗೊಳಿಸಿದ ಆದೇಶ ಪ್ರಶ್ನಿಸಿ ಗಣಿ ಮಾಲೀಕರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಲಕ್ಷ್ಮೀವೆಂಕಟೇಶ್ವರ ಕಲ್ಲು ಗಣಿಗಾರಿಕೆ ಘಟಕ ಸೇರಿ 14 ಕ್ವಾರಿಗಳ ಮಾಲೀಕರು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಹಿರಿಯ ಭೂ ವಿಜ್ಞಾನಿ, ಹಾಗೂ ಮಂಡ್ಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿದ್ದ ಪರವಾನಗಿ ರದ್ದುಪಡಿಸಿ ಜಿಲ್ಲಾ ಕಲ್ಲು ಗಣಿಗಾರಿಕೆ ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರದ ಮುಖ್ಯಸ್ಥರಾದ ಮಂಡ್ಯ ಜಿಲ್ಲಾಧಿಕಾರಿ 2021ರ ಜು.31ರಂದು ಆದೇಶಿಸಿದ್ದಾರೆ. ಪರವಾನಗಿ ರದ್ದುಪಡಿಸುವ ಮುನ್ನ ಕಲ್ಲು ಗಣಿಗಾರಿಕೆ ಘಟಕಗಳಿಗೆ ನೋಟಿಸ್ ನೀಡಿಲ್ಲ, ಆಕ್ಷೇಪಣೆಯನ್ನೂ ಆಲಿಸಿಲ್ಲ ಎಂದು ತಿಳಿಸಿದರು.
ಅಲ್ಲದೇ, ಸರ್ಕಾರ ಪರವಾನಗಿ ರದ್ದುಪಡಿಸಿರುವುದಲ್ಲದೇ, 15 ದಿನಗಳಲ್ಲಿ ಘಟಕಗಳನ್ನು ತೆರವುಗೊಳಿಸಲು ಸೂಚಿಸಿದೆ. ಇದರಿಂದಾಗಿ ಕೋಟ್ಯಂತರ ರೂ ಬಂಡವಾಳ ಹೂಡಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಲಿಕರಿಗೆ ತೊಂದರೆಯಾಗಿದೆ. ಸರ್ಕಾರದ ಆದೇಶ ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯ್ದೆ 2011ರ ಸೆಕ್ಷನ್ 11ಕ್ಕೆ ವಿರುದ್ಧವಾಗಿದೆ. ಹೀಗಾಗಿ, ಪರವಾನಗಿ ರದ್ದುಪಡಿಸಿರುವ ಮಂಡ್ಯ ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
ಇದನ್ನೂ ಓದಿ:ನೋ ವ್ಯಾಕ್ಸಿನೇಷನ್- ನೋ ರೇಷನ್, ನೋ ಪೆನ್ಷನ್ ವಿರುದ್ಧ ಡಿಕೆಶಿ ಆಕ್ರೋಶ..!