ಬೆಂಗಳೂರು: ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಗಳಿಗೆ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಪದ್ಮಶ್ರೀ ಸೇರಿದಂತೆ ಸರ್ಕಾರದ ಪ್ರಶಸ್ತಿಗಳನ್ನು ನ್ಯಾಯಮೂರ್ತಿಗಳಿಗೂ ನೀಡುವಂತೆ ನಿರ್ದೇಶನ ಕೋರಿ ಹುಬ್ಬಳ್ಳಿಯ ವೈದ್ಯ ಡಾ.ವಿನೋದ ಜಿ.ಕುಲಕರ್ಣಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರ ಡಾ. ವಿನೋದ್ ವಾದಿಸಿ, ಪದ್ಮಶ್ರೀ ಸೇರಿದಂತೆ ಯಾವುದೇ ಪ್ರಶಸ್ತಿಗಳಿಗೆ ಹಾಲಿ ನ್ಯಾಯಮೂರ್ತಿಗಳನ್ನು ಪರಿಗಣಿಸುತ್ತಿಲ್ಲ. ನ್ಯಾಯಾಂಗದಲ್ಲಿ ಬದಲಾವಣೆ ತರಬೇಕಾದರೆ ನ್ಯಾಯಮೂರ್ತಿಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕು.
ಆ ಸಂಬಂಧ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನ್ಯಾಯಮೂರ್ತಿಗಳಿಗೆ ಪ್ರಶಸ್ತಿ ನೀಡುತ್ತಾರೆ. ನಮ್ಮಲ್ಲಿ ಇಲ್ಲದಿರುವುದು ಸರಿಯಲ್ಲ ಎಂದರು.
ವಾದ ಆಲಿಸಿದ ಪೀಠ, ಪ್ರಶಸ್ತಿ ಸ್ವೀಕರಿಸುವುದರಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ನ್ಯಾಯಮೂರ್ತಿಗಳಿಗೆ ಪ್ರಶಸ್ತಿ ನೀಡುವುದು ಸಂವಿಧಾನಕ್ಕೆ ವಿರುದ್ಧವಾದುದು. ನೀವು ನ್ಯಾಯಾಂಗದಲ್ಲಿ ಸುಧಾರಣೆ ಬಯಸುವುದಾದರೆ ಅದಕ್ಕೆ ಹಲವು ಮಾರ್ಗಗಳಿದ್ದವು. ನಿಮಗೆ ಪಿಐಎಲ್ ದಾಖಲಿಸಲು ಇದಕ್ಕಿಂತ ಬೇರೆ ವಿಷಯ ಸಿಗಲಿಲ್ಲವೇ? ಎಂದು ಪ್ರಶ್ನಿಸಿತು.
ಅಲ್ಲದೇ, ನ್ಯಾಯಮೂರ್ತಿಗಳಿಗೆ ಯಾವುದೇ ಪ್ರಶಸ್ತಿ ಅಗತ್ಯವಿಲ್ಲ. ನಮಗೆ ಜವಾಬ್ದಾರಿ ಮತ್ತು ಕರ್ತವ್ಯದ ಅರಿವಿದೆ. ಪ್ರಶಸ್ತಿಗಳ ಆಯ್ಕೆ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ಯಾವುದೇ ವ್ಯಕ್ತಿಗೆ ಹೀಗೆ ಮಾಡಬೇಕು ಎಂದು ಕೇಳಲು ಹಕ್ಕಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ:ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ.. ಭಾನುವಾರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿ