ಬೆಂಗಳೂರು: ರಾಜ್ಯದ ಎಲ್ಲಾ 59 ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿಸಿರುವ ಹೈಕೋರ್ಟ್, ನ.2ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅ.8ರಂದು ಹೊರಡಿಸಿದ್ದ ಅಧಿಸೂಚನೆಗೆ ಏಕ ಸದಸ್ಯ ಪೀಠ ತಡೆ ನೀಡಿತ್ತು. ಅಲ್ಲದೇ ಮೀಸಲಾತಿ ಆವರ್ತನೆ ಬಗ್ಗೆ ಪರಿಶೀಲಿಸಿ ಕರಡು ಸಲ್ಲಿಸಲು ತ್ರಿಸದಸ್ಯ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಏಕ ಸದಸ್ಯ ಪೀಠದ ಈ ಮಧ್ಯಂತರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವಿ.ನಾಗರತ್ನ ಹಾಗೂ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠ ಚುನಾವಣೆಗೆ ಹಸಿರು ನಿಶಾನೆ ತೋರಿದೆ.
ಅ.15 ರಂದು ಏಕಸದಸ್ಯ ಪೀಠ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಿದ ವಿಭಾಗೀಯ ಪೀಠ, ರಾಜ್ಯದ ಎಲ್ಲಾ ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನ.2ರೊಳಗೆ ಚುನಾವಣೆ ಪೂರ್ಣಗೊಳಿಸಬೇಕು. ಮೀಸಲು ಪ್ರಶ್ನಿಸಿರುವ ಹಾಸನ, ಅರಸೀಕರೆ, ಶಿಡ್ಲಘಟ್ಟ, ಕೊಪ್ಪಳ ಹಾಗೂ ಹರಿಹರ ನಗರಸಭೆಗಳಿಗೂ ಚುನಾವಣೆ ನಡೆಯಲಿ. ಅದರೆ, ಚುನಾವಣೆಯ ಫಲಿತಾಂಶ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಡಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್, ಕೆಲವೇ ಜನರ ಹಿತಾಸಕ್ತಿಗಳಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆ ಸ್ಥಗಿತಗೊಳ್ಳಬಾರದು. ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ವೇಳಾಪಟ್ಟಿ ಪ್ರಕಟವಾದ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಸರ್ಕಾರದ ಮನವಿ ಪರಿಗಣಿಸಿ ಚುನಾವಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅ.8ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಾಸನ, ಅರಸಿಕೇರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆಯ ಕೆಲ ಚುನಾಯಿತ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿ, ಮೀಸಲಾತಿ ಆವರ್ತನೆ ಬಗ್ಗೆ ಅಧ್ಯಯನ ನಡೆಸಿ ಕರಡು ಸಲ್ಲಿಸಲು ಮೂವರು ಹಿರಿಯ ವಕೀಲರ ತ್ರಿಸದಸ್ಯ ಸಮಿತಿ ನೇಮಿಸಿ ಅ. 15ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.