ಬೆಂಗಳೂರು : ಇತ್ತೀಚೆಗೆ 6ರಿಂದ 8ನೇ ತರಗತಿವರೆಗೆ ಆರಂಭವಾಗಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆಯೇ ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ಹೈಕೋರ್ಟ್, ಈ ಸಂಬಂಧ ಮಾರ್ಚ್ 30ರೊಳಗೆ ವರದಿ ನೀಡುವಂತೆ ಸೂಚಿಸಿದೆ.
ಈ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಅಂಗನವಾಡಿ ಮಕ್ಕಳಿಗೆ ಸಿದ್ಧ ಆಹಾರ ನೀಡಲಾಗುತ್ತಿರುವ ಕುರಿತು ಹಾಗೂ ಶಾಲೆಗಳಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿರುವ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಸಂವಿಧಾನದ 21ನೇ ವಿಧಿ ಶಿಕ್ಷಣ ಹಕ್ಕನ್ನು ನೀಡಿದೆ. ಈ ಹಕ್ಕಿನಡಿ ಮಧ್ಯಾಹ್ನದ ಬಿಸಿಯೂಟವನ್ನೂ ನೀಡಬೇಕಿದೆ. ಹಸಿದ ಹೊಟ್ಟೆಯಲ್ಲಿ ಮಕ್ಕಳು ಕಲಿಯುವುದು ಅಸಾಧ್ಯ ಎಂದಿದೆ.
ಹಾಗೆಯೇ, ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಶಾಲೆಗಳನ್ನು ಆರಂಭಿಸಿದೆ. ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಹೀಗಾಗಿ, ಮಧ್ಯಾಹ್ನದ ಬಿಸಿಯೂಟವನ್ನೂ ನೀಡಲು ಅಗತ್ಯ ಕ್ರಮಕೈಗೊಳ್ಳಬಹುದು. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿಗೆ ಕಾಯುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ:ಮೂರು ಕ್ಷೇತ್ರಗಳ ಉಪ ಚುನಾವಣೆ.. ಹೈಕಮಾಂಡ್‌ನತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಚಿತ್ತ..