ಬೆಂಗಳೂರು: ರಾಜ್ಯದಲ್ಲಿ ಮಳೆ ಬಂದಾಗ ಮತ್ತು ಇನ್ನಿತರ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್ ದುರಂತಗಳಲ್ಲಿ ತೀವ್ರ ಸಾವು-ನೋವು ಜರುಗಿದ್ದು, ಅವುಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ದುರ್ಘಟನೆ ನಡೆದ ಕೂಡಲೇ ಸ್ಥಳ ಪರಿಶೀಲಿಸುವ ಬೆಸ್ಕಾಂ, ಮೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ ನಂತರ ಕ್ರಮ ಜರುಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಇನ್ನೊಂದೆಡೆ ಜನ ವಾಸಿಸುವ ಪ್ರದೇಶಗಳಲ್ಲೇ ಹೈಟೆನ್ಶನ್ ತಂತಿಗಳು ಹಾದುಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಹೈಟೆನ್ಶನ್ ವೈರ್ ಹಾದುಹೋಗಿರುವ ಕುರಿತು ಸಮೀಕ್ಷೆ ನಡೆಸಿರುವ ಬೆಸ್ಕಾಂ, ಬೆಂಗಳೂರಿನಲ್ಲಿ 10,700 ಮನೆಗಳಿಗೆ ನೋಟಿಸ್ ನೀಡಿದೆ. ಈ ಪಟ್ಟಿಯನ್ನು ಬಿಬಿಎಂಪಿಗೆ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೈಟೆನ್ಶನ್ ವಿದ್ಯುತ್ ತಂತಿಯಡಿ ವಾಸಿಸುತ್ತಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಆ ಕಟ್ಟಡಗಳ ತೆರವು ಮಾಡಬೇಕೆಂಬ ನಿಯಮವಿದ್ದರೂ ಪಾಲಿಕೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಇತ್ತ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಕೂಡ ನಾನಾ ಸಬೂಬು ನೀಡಿ ನುಣುಚಿಕೊಳ್ಳಲು ಯತ್ನಿಸುತ್ತಾರೆ.
ಈ ಸುದ್ದಿಯನ್ನೂ ಓದಿ... ರೈತರ ಖಾತೆಗೆ ಬೆಳೆಹಾನಿ ಇನ್‌ಪುಟ್ ಸಬ್ಸಿಡಿ ಜಮೆ: 5 ಜಿಲ್ಲೆಗಳಲ್ಲಿ ಹಣ ಸಂದಾಯ ವಿಳಂಬ
2019ರಲ್ಲಿ ಸಾಕಷ್ಟು ದುರ್ಘಟನೆಗಳು ನಡೆದಿವೆ. ಮತ್ತಿಕೆರೆಯಲ್ಲಿ ಮನೆಯ ಮಹಡಿಗೆ ಚೆಂಡು ತರಲು ಹೋದ 14 ವರ್ಷದ ಬಾಲಕನಿಗೆ ಹೈಟೆನ್ಶನ್ ವೈರ್ ತಗುಲಿ ಮೃತಪಟ್ಟಿದ್ದು ಹೆಚ್ಚು ಸುದ್ದಿಯಾಗಿತ್ತು. ಈ ಘಟನೆ ನಡೆದ ಕೆಲದಿನಗಳ ನಂತರ ಮಂಜುನಾಥ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸಿಸುತ್ತಿದ್ದ ಕಾರ್ಮಿಕರೊಬ್ಬರು ವೈರ್ ತಗಲು ಪ್ರಾಣಬಿಟ್ಟಿದ್ದರು. ಅಲ್ಲದೆ, ಹೈಟೆನ್ಶನ್ ವೈರ್ಗಳನ್ನು ನೆಲದಡಿ ಸಂಪರ್ಕ ಕಲ್ಪಿಸುವ ಯಾವುದೇ ಯೋಜನೆಯನ್ನೂ ನಗರದಲ್ಲಿ ಇನ್ನೂ ಆರಂಭಿಸಿಲ್ಲ. ಇದರಿಂದ ಜನವಸತಿ ಪ್ರದೇಶದ ನಿವಾಸಿಗಳು ಭೀತಿಯಿಂದಲೇ ಬದುಕಬೇಕಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಕಾರ, 66 ಕೆ.ವಿ ವಿದ್ಯುತ್ ಮಾರ್ಗ ಮತ್ತು ಕಟ್ಟಡದ ನಡುವೆ 4 ಮೀಟರ್ ಎತ್ತರ, 2.3 ಮೀಟರ್ ಅಗಲದಷ್ಟು ಅಂತರ ಕಾಯ್ದುಕೊಳ್ಳಬೇಕು. ಹಾಗೇ 220 ಕಿ.ಮೀ ವಿದ್ಯುತ್ ತಂತಿಗಳಿರುವ ಕಡೆ 5.5 ಮೀ ಎತ್ತರ ಹಾಗೂ 3.8 ಮೀ ಅಗಲದಷ್ಟು ಅಂತರದಲ್ಲಿ ಕಟ್ಟಡ ನಿರ್ಮಿಸಬೇಕು. ಆದರೆ, ನಗರದಲ್ಲಿ ಈ ನಿಯಮಗಳು ಯಾವೂ ಪಾಲನೆಯಾಗುತ್ತಿಲ್ಲ. ಸಾರ್ವಜನಿಕರ ದೂರಿಗೂ ಬೆಸ್ಕಾಂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಇನ್ನೂ ಕೆಲವೆಡೆ ಶಾಲೆಗಳ ಬಳಿಯೇ ಹೈಟೆನ್ಶನ್ ವೈರ್ಗಳು ಹಾದುಹೋಗಿವೆ. ಈ ಕುರಿತು ಕೆಪಿಟಿಸಿಎಲ್ ಕ್ರಮ ಕೈಗೊಂಡು ಮುಂದಾಗುವ ಅನಾಹುತಗಳನ್ನು ತಡೆಯಬೇಕಿದೆ.