ಬೆಂಗಳೂರು: ನಾಳೆ ಗಣರಾಜೋತ್ಸವ ದಿನದಂದು ದೆಹಲಿಯಲ್ಲಿ ರೈತರ ರ‍್ಯಾಲಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನೆ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿಕೊಂಡಿವೆ.
ಕೃಷಿ ಕಾಯ್ದೆ ವಿರೋಧಿಸಿ ನಾಳೆ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಪ್ರತಿಭಟನೆ ನಡೆಸಲು ಸಿದ್ಧತೆ ಬೆನ್ನಲೇ ನಗರದಲ್ಲಿಯೂ ಇದೇ ಮಾದರಿಯಲ್ಲಿ ಪ್ರತಿಭಟನೆ ಯೋಜನೆ ರೂಪಿಸಿಕೊಂಡಿವೆ.. ಆದರೆ ನಗರ ಪೊಲೀಸರು ಟ್ರ್ಯಾಕ್ಟರ್ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಶಾಂತಿಯುತ ಪ್ರತಿಭಟನೆಗಷ್ಟೇ ಅವಕಾಶ ನೀಡಿದ್ದಾರೆ.. ಮುತ್ತಿಗೆ ಹಾಕದಂತೆ ಸೂಚನೆ ನೀಡಿದ್ದಾರೆ. ನಾಳೆ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈತರು ಜಮಾವಣೆಗೊಳ್ಳಲಿದ್ದಾರೆ..ಅಲ್ಲಿಂದ ಆನಂದ್ ರಾವ್ ಮಾರ್ಗದ ಮೂಲಕ ಫ್ರೀಡಂಪಾರ್ಕ್ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ..
ಬಿಗಿ ಪೊಲೀಸ್ ಬಂದೋಬಸ್ತ್:
ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರುವುದರಿಂದ ಅಹಿತಕರ ಘಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ. ಮುಂಜಾಗ್ರತ ಕ್ರಮವಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿಗಳು ಭದ್ರತೆ ನೋಡಿಕೊಳ್ಳಲಿವೆ.
ಟ್ರ್ಯಾಕ್ಟರ್ನಲ್ಲಿ ಬರುವ ಹಾಗಿಲ್ಲ:
ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತ ಪ್ರದೇಶಗಳಿಂದ ಬರುವ ಪ್ರತಿಭಟನಾಕಾರರು ಟ್ರ್ಯಾಕ್ಟರ್ನಲ್ಲಿ ಬರುವಂತಿಲ್ಲ.. ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ರ್ಯಾಕ್ಟರ್ ನಲ್ಲಿ ಬರಲು ಅವಕಾಶ ನೀಡಿಲ್ಲ. ಇನ್ನಿತರ ವಾಹನಗಳಲ್ಲಿ ಬಂದು ಒಂದೆಡೆ ಪಾರ್ಕ್ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದಾರೆ.
ಧ್ವಜಾರೋಹಣದ ಬಳಿಕ ಪ್ರತಿಭಟನೆ ಮಾಡಲಿರೋ ರೈತ ಸಂಘಟನೆಗಳು, ಮುಂಜಾನೆಯೇ ರೈಲ್ವೆ ನಿಲ್ದಾಣದ ಬಳಿಯಿಂದ ಫ್ರೀಡಂಪಾರ್ಕ್ ವರೆಗೂ ಮೆರವಣಿಗೆ ನಡೆಸುವುದರಿಂದ ಸಂಚಾರ ದಟ್ಟಣೆ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಸಂಚಾರಿ ಪೊಲೀಸರು ಈ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ಬಂದ್:
ಮೆಜೆಸ್ಟಿಕ್- ಆನಂದ್ ರಾವ್ ಸರ್ಕಲ್ - ಮಹಾರಾಣಿ ಕಾಲೇಜು ರಸ್ತೆಗಳು ವಾಹನ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.. ವಾಹನ ಸವಾರರ ಪರ್ಯಾಯ ಮಾರ್ಗವಾಗಿ ಮೆಜೆಸ್ಟಿಕ್ ಮೂಲಕ ಹೋಗುವ ವಾಹನಗಳು ಆನಂದ್ ರಾವ್ ಸರ್ಕಲ್- ಹಳೇ ಜೆಡಿಎಸ್ ಆಫೀಸ್ - ರೇಸ್ ಕೋರ್ಸ್ - ವಿಧಾನಸೌಧ - ಸಿಐಡಿ ಕಚೇರಿ ಮಾರ್ಗವಾಗಿ ಕಾರ್ಪೊರೇಷನ್ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಇಲ್ಲೆಲ್ಲ ಮುತ್ತಿಗೆ ಹಾಕುವ ಹಾಗಿಲ್ಲ:
ಅದೇ ರೀತಿ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆಗೆ ಬಿಟ್ಟರೇ ಮುತ್ತಿಗೆಗೆ ಇಲ್ಲ ಅವಕಾಶವಿಲ್ಲ.. ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ್ರೆ ಪೊಲೀಸರು ಬಂಧಿಸಲಿದ್ದಾರೆ.. ಹೀಗಾಗಿ ಮಹಾರಾಣಿ ಕಾಲೇಜು ಮುಂದೆಯೇ ಬ್ಯಾರಿಕೇಡ್ ಹಾಕಲು ಸಿದ್ದತೆ ನಡೆಸಿಕೊಂಡಿದ್ದಾರೆ. ಪ್ರತಿಭಟನೆಗೆ ವಾಹನಗಳನ್ನು ಬರುವ ಫ್ರೀಡಂ ಪಾರ್ಕ್ ಬಳಿಯೇ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಕೋಲಾರದಲ್ಲಿ ಶಾಲಾ ವಾಹನ ಪಲ್ಟಿ: 15 ಮಕ್ಕಳಿಗೆ ಗಾಯ