ಬೆಂಗಳೂರು : ನಗರದ ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಿರುವ ಸಂಬಂಧ ಹೈಕೋರ್ಟ್ ತೀವ್ರ ಬೇಸರ ವ್ಯಕ್ತ ಪಡಿಸಿದೆ. ಸಾರ್ವಜನಿಕ ರಸ್ತೆಯಲ್ಲಿ ಧಾರ್ಮಿಕ ಕೇಂದ್ರ ನಿರ್ಮಾಣ ಮಾಡಿದರು ಜನ ಏನು ಮಾಡಬೇಕು? ಎಂದು ಮೌಖಿಕವಾಗಿ ಪ್ರಶ್ನಿಸಿದೆ.
ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪಿಸಿ ಕದಕಟ್ಟೆಯ ನಿವಾಸಿ ಸಿ ಹೊನ್ನಯ್ಯ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸ್ವಾತಂತ್ರ ಪ್ರಾಧಿಕಾರರಿಂದ ಸ್ಪಷ್ಟವಾದ ವರದಿ ಪಡೆಯುವುದು ಸೂಕ್ತ ಎಂದೆನಿಸಿದೆ. ಸಂಬಂಧಿತ ಎಲ್ಲರಿಗೂ ನೋಟಿಸ್ ಜಾರಿ ಮಾಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕರು (ಡಿಡಿಎಲ್ಆರ್) ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಿಕ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು. ನೋಟಿಸ್ ಪಡೆದ ಸಂಬಂಧಿತರು ಸೂಕ್ತ ದಾಖಲೆಗಳನ್ನು ಡಿಡಿಎಲ್ಆರ್ ಅವರಿಗೆ ನೀಡಬೇಕು. ಡಿಡಿಎಲ್ಆರ್ ಅವರು ಸಂಬಂಧಿತ ಎಲ್ಲ ಸಾರ್ವಜನಿಕ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿ ಸಲ್ಲಿಸಬೇಕು ಎಂದು ಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರಿ ರಸ್ತೆ ಒತ್ತುವರಿ ಮಾಡಿ ದೇವಸ್ಥಾನ ನಿರ್ಮಿಸುತ್ತಿರುವುದಲ್ಲದೇ ಓಡಾಟಕ್ಕೆ ರಸ್ತೆ ನಿರ್ಬಂಧಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಮೂರ್ತಿ ದೀಕ್ಷಿತ್ ಅವರು, ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ, ದೇವಾಲಯ ನಿರ್ಮಿಸಲಾಗಿದೆಯೇ? ನಿಮ್ಮ (ಬಿಬಿಎಂಪಿ) ವರದಿ ಏನಿದೆ? ಸಾರ್ವಜನಿಕ ರಸ್ತೆಯನ್ನು ದೇವಸ್ಥಾನ ಅಥವಾ ಬೇರೆ ಪೂಜಾ ಸ್ಥಳ ನಿರ್ಮಿಸಲು ಬಳಸಬಹುದು ಎಂಬುದಕ್ಕೆ ದಾಖಲೆ ಎಲ್ಲಿದೆ? ಬಿಬಿಎಂಪಿ ಸ್ಟೋರಿ ನಮಗೆ ಬೇಕಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಇಲ್ಲವೇ ಎಂಬುದಷ್ಟೇ ನಮಗೆ ಬೇಕು. ನಾವು ಸಾರ್ವಜನಿಕ ಆಸ್ತಿಯ ರಕ್ಷಕರು. ಇದು ಖಾಸಗಿ ಆಸ್ತಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸಿದರೇ ಜನರು ಏನು ಮಾಡಬೇಕು? . ಬಿಬಿಎಂಪಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಒತ್ತುವರಿಯಾಗಿದೆ ಉಲ್ಲೇಖಿಸಿದ್ದೀರಿ? ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ತಿಳಿಸಿತು.
ಇದನ್ನೂ ಓದಿ : ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ನಿರ್ದೇಶಕರು ರಾಜೀನಾಮೆ ನೀಡಿದ್ರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್