ಬೆಂಗಳೂರು : ಕೌಟುಂಬಿಕ ಪ್ರಕರಣವೊಂದರಲ್ಲಿ ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯನ್ನು ತೊರೆದು ತವರು ಮನೆಗೆ ಹೋಗಿದ್ದ ಪತ್ನಿ ಮೂರು ವರ್ಷ ಕಳೆದರೂ ಹಿಂದಿರುಗದ ಅಂಶ ಪರಿಗಣಿಸಿ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಚ್ಛೇದನ ಮಂಜೂರು ಮಾಡಿ 2016ರಲ್ಲಿ ಕೋಲಾರದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಪೀಠ, ಈ ಆದೇಶ ಮಾಡಿದೆ.
ಪರಿತ್ಯಾಗದ ಆಧಾರದಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೌಟುಂಬಿಕ ನ್ಯಾಯಾಲಯದಿಂದ ಅರ್ಜಿದಾರ ಮಹಿಳೆಗೆ ನೋಟಿಸ್ ಜಾರಿಯಾಗಿದೆ. ಆ ಪ್ರಕರಣದಲ್ಲಿ ಮಹಿಳೆ ವಕೀಲರನ್ನು ನಿಯೋಜಿಸಿಕೊಂಡಿದ್ದಾರೆ. ಆದರೂ, ಪತಿಯ ಅರ್ಜಿಗೆ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಪತಿಯ ಅರ್ಜಿಗೆ ಪತ್ನಿ ಸೂಕ್ತವಾಗಿ ಉತ್ತರ ನೀಡದಿದ್ದಾಗ, ಗಂಡನ ಹೇಳಿಕೆಗಳನ್ನೇ ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯವು, ಪತ್ನಿ ಸತತವಾಗಿ ಎರಡು ವರ್ಷಕ್ಕೂ ಅಧಿಕ ಸಮಯದಿಂದ ಪತ್ನಿ ದೂರ ಇರುವುದರಿಂದ ಪತಿಯನ್ನು ಪರಿತ್ಯಾಗ ಮಾಡಿರುವುದು ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಪತ್ನಿಯ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ : ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆಯು ಕೋಲಾರದ ವ್ಯಕ್ತಿಯನ್ನು 2010 ರ ಜೂನ್ 18ರಂದು ವಿವಾಹವಾಗಿದ್ದರು. 2014 ರ ಅಕ್ಟೋಬರ್ 29 ರಂದು ಪತಿ ಕೌಟುಂಬಿಕ ಅರ್ಜಿ ಸಲ್ಲಿಸಿ, ಮದುವೆಯಾದ ಐದು ತಿಂಗಳಿಗೆ ಪತ್ನಿ ನನ್ನನ್ನು ತೊರೆದು ಹೋಗಿದ್ದಾಳೆ. ಸತತ 3 ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. 2014 ರ ಸೆಪ್ಟೆಂಬರ್ 2 ರಂದು ವಿಚ್ಛೇದನಕ್ಕೆ ಒಪ್ಪಿಗೆ ಕೊಡುವಂತೆ ಪತ್ನಿಗೆ ನೋಟಿಸ್ ನೀಡಿದ್ದರೂ, ಆ ನೋಟಿಸ್‌ಗೆ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ 'ಪರಿತ್ಯಾಗ' ಆಧಾರದ ಮೇಲೆ ನಮ್ಮ ವಿವಾಹ ಅನೂರ್ಜಿತಗೊಳಿಸಿ, ವಿಚ್ಛೇದನ ನೀಡಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆಗೆ ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ನೋಟಿಸ್ ಜಾರಿಗೊಳಿಸಿತ್ತು. ಪ್ರಕರಣದಲ್ಲಿ ತನ್ನ ಪರ ವಾದ ಮಂಡಿಸಲು ಪತ್ನಿ ವಕೀಲರೊಬ್ಬರನ್ನು ನಿಯೋಜಿಸಿಕೊಂಡಿದ್ದರು. ಆದರೆ, ಪತಿಯ ಅರ್ಜಿ ಹಾಗೂ ಹೇಳಿಕೆಗೆ ಪತ್ನಿ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ ಹಾಗೂ ತನ್ನ ಪರವಾದ ಸಾಕ್ಷ್ಯಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಿರಲಿಲ್ಲ. ಈ ಅಂಶವನ್ನು ಮನಗಂಡಿದ್ದ ನ್ಯಾಯಾಲಯವು ದಂಪತಿಯ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿ 2016 ರ ಏಪ್ರಿಲ್ 18ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ವಿದ್ಯಾರ್ಥಿನಿ ಶಿಕ್ಷಣಕ್ಕಾಗಿ ರೈಲು ಮುಂದುವರಿಸಿದ ಜಪಾನ್ ದೇಶದಿಂದ ಸರ್ಕಾರ ಕಲಿಯಬೇಕು: ಹೈಕೋರ್ಟ್