ಬೆಂಗಳೂರು: 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್ ವೇಳೆ 2019-20ನೇ ಸಾಲಿನ ಹೆಚ್ಚುವರಿ ಶಿಕ್ಷಕರಿಗೆ ಆದ್ಯತೆ ನೀಡುವಂತೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕೆಎಟಿ ಆದೇಶ ಪ್ರಶ್ನಿಸಿ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವೇಳೆ 2019-20ನೇ ಸಾಲಿನ ಹೆಚ್ಚುವರಿ ಶಿಕ್ಷಕರಿಗೆ ಆದ್ಯತೆ ನೀಡಬೇಕು ಎಂಬುದು ನ್ಯಾಯಸಮ್ಮತವಲ್ಲ.
ಎಲ್ಲಾ ಶಿಕ್ಷಕರನ್ನು ಸಮಾನವಾಗಿ ಕಾಣಬೇಕೇ ಹೊರತು ಆದ್ಯತೆ ಹೆಸರಲ್ಲಿ ತಾರತಮ್ಯ ಮಾಡಬಾರದು. ಹಾಗಾಗಿ ಶಿಕ್ಷಣ ಇಲಾಖೆಯ ಆದೇಶವನ್ನು ರದ್ದುಪಡಿಸಿ 2020ರ ಡಿ. 28ರಂದು ಕೆಎಟಿ ನೀಡಿರುವ ತೀರ್ಪು ಸರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
2020-21ನೇ ಸಾಲಿನ ವರ್ಗಾವಣೆ ಸಂಬಂಧ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಕಡ್ಡಾಯವಾಗಿ ಗಣಕೀಕೃತ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ನಡೆಸುವ ಸಂಬಂಧ 2020ರ ನ.11ರಂದು ಆದೇಶ ಹೊರಡಿಸಿತ್ತು. ಕೌನ್ಸೆಲಿಂಗ್ ವೇಳೆ 2019-20ನೇ ಸಾಲಿನ ಹೆಚ್ಚುವರಿ ಶಿಕ್ಷಕರಿಗೆ ಆದ್ಯತೆ ನೀಡುವಂತೆ ಸೂಚಿಸಿತ್ತು.
ಶಿಕ್ಷಣ ಇಲಾಖೆ ಆದೇಶ ಪ್ರಶ್ನಿಸಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಹಾಲೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಬಿ.ಎನ್.ಮಹೇಶ್ವರಪ್ಪ ಹಾಗೂ ಇತರ 7 ಮಂದಿ ಕೆಎಟಿ ಮೆಟ್ಟಿಲೇರಿದ್ದರು. ಬಳಿಕ ಕಲಬುರಗಿ, ಮಂಡ್ಯ, ಶಿವಮೊಗ್ಗ, ಧಾರವಾಡ, ತುಮಕೂರು ಜಿಲ್ಲೆಯ ಹೆಚ್ಚುವರಿ ಶಿಕ್ಷಕರು ಸಹ ಕೆಎಟಿ ಮೊರೆ ಹೋಗಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ್ದ ಕೆಎಟಿ, 2019-20ನೇ ಸಾಲಿನ ಹೆಚ್ಚುವರಿ ಶಿಕ್ಷಕರಿಗೆ ಆದ್ಯತೆ ನೀಡಿರುವ ಶಿಕ್ಷಣ ಇಲಾಖೆಯ ಆದೇಶ ನ್ಯಾಯಸಮ್ಮತವಲ್ಲ ಎಂದು ತಿಳಿಸಿ, ಸರ್ಕಾರದ ಆದೇಶ ರದ್ದುಪಡಿಸಿ 2020ರ ಡಿ. 28ರಂದು ತೀರ್ಪು ನೀಡಿತ್ತು. ಇದೀಗ ಹೈಕೋರ್ಟ್ ಕೆಎಟಿ ಆದೇಶವನ್ನು ಎತ್ತಿಹಿಡಿದಿದೆ.