ಬೆಂಗಳೂರು: ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್ ವೇಳೆ ಅನುಚಿತ ಘಟನೆಗಳು ಬೆಳಕಿಗೆ ಬಂದಿರುವ ಹಿನ್ನೆಲೆ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್‌ನ್ನು ಹೈಕೋರ್ಟ್ ಸ್ಥಗಿತಗೊಳಿಸಿದೆ.
ಮಂಗಳವಾರ ಬೆಳಗ್ಗೆ ನ್ಯಾಯಾಲಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಮಾತನಾಡಿ, ನಾವು ಎಲ್ಲಾ ಲೈವ್ ಸ್ಟ್ರೀಮಿಂಗ್ಗಳನ್ನು (ನೇರ ಪ್ರಸಾರವನ್ನು) ನಿರ್ಬಂಧಿಸುತ್ತಿದ್ದೇವೆ. ವಿಡಿಯೋ ಕಾನ್ಫರೆನ್ಸ್ಗೆ ಅವಕಾಶ ಇರುವುದಿಲ್ಲ ಎಂದು ಪ್ರಕಟಿಸಿದರು.
ಅಲ್ಲದೆ, ದುರದೃಷ್ಟವಶಾತ್ ತಂತ್ರಜ್ಞಾನ ದುರ್ಬಳಕೆ ಅಥವಾ ಕೆಲವರಿಂದ ಅನುಚಿತ ವರ್ತನೆ ನಡೆದಿದೆ. ಇದು ಅನಿರ್ಬಂಧಿತ ಪರಿಸ್ಥಿತಿಯಾಗಿದೆ. ಇದೆಲ್ಲದರ ನಡುವೆ ಹೈಕೋರ್ಟ್ ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವುದರ ಪರವಾಗಿ ಇರಲಿದೆ ಎಂದು ತಿಳಿಸಿದರು.
ಜತೆಗೆ, ಇದೊಂದು ಅನಿರ್ಬಂಧಿತ ಪರಿಸ್ಥಿತಿಯಾಗಿದ್ದು, ನಮಗೆ ಸಹಕರಿಸಬೇಕು. ಈ ಸಂಬಂಧ ಕಂಪ್ಯೂಟರ್ ತಂಡ ಅಥವಾ ರಿಜಿಸ್ಟ್ರಾರ್ಗೆ ದೂರು ಕೊಂಡೊಯ್ಯಬೇಡಿ. ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾಧ್ಯಮದವರಿಗೆ ವಿಚಾರ ತಿಳಿಸಿ, ನಮಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದಾದ ಬಳಿಕ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಸೈಬರ್ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಎಲ್ಲಾ ಕಡೆ ವಿಡಿಯೋ ಕಾನ್ಫರೆನ್ಸ್ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಎಫ್ಐಆರ್: ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗಲೇ ಅನುಚಿತವಾಗಿ ವರ್ತಿಸಿ ಆಶ್ಲೀಲ ಚಿತ್ರ ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದ ಕಿಡಿಗೇಡಿಗಳ ವಿರುದ್ಧ ನಗರ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೈಕೋರ್ಟ್ನ ಗಣಕೀಕರಣ ವಿಭಾಗದ ರಿಜಿಸ್ಟ್ರರ್ ಎನ್.ಸುರೇಶ್ ಎಂಬುವರು ನೀಡಿದ ದೂರು ಆಧರಿಸಿ ಆರೋಪಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಸೆಕ್ಷನ್ 67, 67 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ಕಲಾಪ ನಡೆಸುತ್ತಿದ್ದರು. ವಿಡಿಯೊ ಲಿಂಕ್ ಮೂಲಕ ಸಂಬಂಧ ವಕೀಲರು ಹಾಗೂ ಕಕ್ಷಿದಾರರು ಕಲಾಪದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಿಡಿಗೇಡಿಗಳು ಲಿಂಕ್ ಮೂಲಕ ಲಾಗಿನ್ ಆಗಿ ಅನುಚಿತವಾಗಿ ವರ್ತಿಸಿ ಆಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಸುರೇಶ್ ಅವರು ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸರು, ಕಿಡಿಗೇಡಿಗಳು ಬಳಸಿದ್ದ ಐಪಿ ವಿಳಾಸ ಹಾಗೂ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂಓದಿ: ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್