ಬೆಂಗಳೂರು: ಜಿಲ್ಲಾ ನ್ಯಾಯಮೂರ್ತಿಗಳ ವರ್ಗಾವಣೆ ಕುರಿತು ಮಧ್ಯಪ್ರವೇಶಿಸಿದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪದಡಿ ಚಿತ್ರದುರ್ಗ ಮುರುಘಾ ಮಠದ ಎಸ್‌ಜೆಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆದ ಉದ್ಯಮಿ ಎಂ.ಭರತ್ ಕುಮಾರ್ ಎಂಬುವರಿಗೆ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೋಕ್ಸೊ) ವಿವಿಧ ಕಲಂಗಳ ಆರೋಪದಡಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲು ಸೇರಿದ ನಂತರ ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಇದಕ್ಕೂ ಮುನ್ನ 2022ರ ಡಿಸೆಂಬರ್ 2ರಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಂ.ಭರತ್ ಕುಮಾರ್ ಅವರನ್ನು ಶರಣರು ನೇಮಕ ಮಾಡಿದ್ದರು.
ಸರ್ಕಾರದ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಏತನ್ಮಧ್ಯೆ ವಸ್ತ್ರದ ಅವರು ಆರು ತಿಂಗಳ ಅವಧಿ ನಂತರ ಹುದ್ದೆಯಿಂದ ತೆರವಾಗಿದ್ದರು. ಈ ಕುರಿತ ಮೇಲ್ಮನವಿಯ ವಿಚಾರಣಾ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶಿಸಿತ್ತು.
ಕಾನೂನು ಹೋರಾಟದ ವಿವಿಧ ಬೆಳವಣಿಗೆಗಳ ಸಮಯದಲ್ಲೇ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಬಿ.ಎಸ್. ರೇಖಾ ಅವರಿಗೆ ವರ್ಗಾವಣೆಯಾಗಿತ್ತು. ಈ ವರ್ಗಾವಣೆಯನ್ನು ತಡೆಯಬೇಕು ಮತ್ತು ಮಠದ ಆಡಳಿತದ ಹಿತದೃಷ್ಟಿಯಿಂದ ಅವರನ್ನು ಇಲ್ಲಿಯೇ ಉಳಿಸಬೇಕು ಎಂದು ಕೋರಿ ಎಂ. ಭರತ್ ಕುಮಾರ್ 2023ರ ಡಿಸೆಂಬರ್ 15 ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿದ್ದರು.
ನ್ಯಾಯಾಧೀಶರ ವರ್ಗಾವಣೆ ಹೈಕೋರ್ಟ್ ಆಡಳಿತಕ್ಕೆ ಸಂಬಂಧಿಸಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಭರತ್ ಕುಮಾರ್ ಮೂಗು ತೂರಿಸಿದ್ದಾರೆ. ನ್ಯಾಯಾಂಗದ ಘನತೆಗೆ ಅಗೌರವ ಉಂಟು ಮಾಡಿದ್ದಾರೆ. ಸಂಸ್ಥೆಗೆ ಕೆಟ್ಟ ಹೆಸರು ತರಲು ಕಾರಣರಾಗಿದ್ದು, ಗುರುತರ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಇದು ಕ್ರಿಮಿನಲ್ ಅಪರಾಧ ಎಂದು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ನಿರ್ದೇಶಕರು ರಾಜೀನಾಮೆ ನೀಡಿದ್ರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್