ಬೆಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ದಲಿತರ ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಕಿರುನಾಟಕ (ಸ್ಕಿಟ್) ಪ್ರದರ್ಶಿಸಿದ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಬೆಂಗಳೂರು ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಏಳು ವಿದ್ಯಾರ್ಥಿಗಳ ವಿರುದ್ಧದ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ರದ್ದು ಕೋರಿ ನೈಮಾ ಅಕ್ತರ್ ನಜಾರಿಯಾ ಸೇರಿ ಏಳು ಮಂದಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: 2023ರ ಫೆಬ್ರವರಿ 8ರಂದು ಕಾಲೇಜು ವತಿಯಿಂದ ನಗರದ ನಿಮ್ಹಾನ್ಸ್ ಕನ್ವೆಂನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಯುವಜನೋತ್ಸವದ ನಿಮಿತ್ತ ಅರ್ಜಿದಾರ ವಿದ್ಯಾರ್ಥಿಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೀಸಲು ವ್ಯವಸ್ಥೆ ಕುರಿತು ವಿಡಂಬನಾತ್ಮಕ ಕಿರುನಾಟಕ (ಮ್ಯಾಡ್- ಆ್ಯಡ್ ಸ್ಕಿಟ್) ಪ್ರದರ್ಶನ ನೀಡಿದ್ದರು. ಅದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ವಿದ್ಯಾರ್ಥಿಗಳು ಹೇಳಿದ್ದರು ಎನ್ನಲಾಗಿತ್ತು. ಕಿರುನಾಟಕದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು, ಅದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಕುರಿತಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು 2023ರ ಫೆಬ್ರವರಿ 10ರಂದು ಜಯನಗರ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಂತರ ಜಾಮೀನು ಮೇಲೆ ಅವರು ಬಿಡುಗಡೆಯಾಗಿದ್ದರು. ಪ್ರಕರಣವು ನಗರದ 70ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ವಿದ್ಯಾರ್ಥಿಗಳು ದುರುದ್ದೇಶವಿಲ್ಲದೇ ಕೇವಲ ವಿಡಂಬನಾತ್ಮಕವಾಗಿ ಕಿರು ನಾಟಕ ಪ್ರದರ್ಶಿಸಿದ್ದಾರೆ. ವಿಡಂಬನಾತ್ಮಕ ಸಾಹಿತ್ಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದು ಕಲ್ಪನೆ, ಪರಿಕಲ್ಪನೆ, ನೀತಿ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಹಾಸ್ಯದ ಮೂಲಕ ಟೀಕಿಸಲು ಉದ್ದೇಶಿಸಲಾಗಿದೆ. ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಸಂವಿಧಾನದ ಪರಿಚ್ಛೇದ 19ನೇ ವಿಧಿಯ ಅಡಿ (ಅಭಿವ್ಯಕ್ತಿ ಸ್ವಾತಂತ್ರ್ಯ) ರಕ್ಷಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಪ್ರಕರಣ ಸಂಬಂಧ ದೂರು ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಿಗೆ ಯಾವುದೇ ಅಧಿಕಾರವಿಲ್ಲ. ದೂರಿನಲ್ಲಿ ಹೇಳಿರುವಂತೆ ಅರ್ಜಿದಾರರು ಎಸ್‌ಸಿ-ಎಸ್‌ಟಿ ಸಮುದಾಯದ ಯಾವೊಬ್ಬರಿಗೂ ಅವಮಾನ, ಅಪಮಾನ ಹಾಗೂ ನಿಂದನೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಆ ಸಮುದಾಯದ ಯಾರಿಗೂ ಅಗೌರವ ತೋರಿಲ್ಲ. ನಾಟಕವು ಸಭಾಂಗಣವೊಂದರಲ್ಲಿ ಪ್ರದರ್ಶನವಾಗಿದೆಯೇ ಹೊರತು ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ಪ್ರಕರಣದಿಂದ ಅರ್ಜಿದಾರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹಾಕಲ್ಪಡುವ ಭೀತಿ ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ನೀಲಕಂಠ್ ಬೋರ್ಕರ ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ. ಪ್ರತೀಕ್ ತೋಡ್ಕರ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ 2023ರ ಜುಲೈ 5ರಂದು ಹೈಕೋರ್ಟ್ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕಿರಿಯ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಹೊರಡಿಸಿದ್ದ ಅಧಿಸೂಚನೆ ರದ್ದು