ಬೆಂಗಳೂರು : ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಿಂದ ವಿವಿಧ ಹುದ್ದೆಗಳಿಗೆ ನಡೆಸುತ್ತಿದ್ದ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಹಾಲು ಒಕ್ಕೂಟ ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೂ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ ಎಂದು ಆರೋಪಿಸಿ ಅಂಕನಹಳ್ಳಿಯ ಕೀರ್ತಿರಾಜ್ ಎಂಬುವರು ಸೇರಿ 9 ಮಂದಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಆಯ್ಕೆ ಪಟ್ಟಿಯನ್ನು ಪ್ರಕಟಿಸದಂತೆ ನೇಮಕಾತಿ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸೊಸೈಟಿಗಳ ಒಕ್ಕೂಟ 193 ವಿವಿಧ ಹುದ್ದಗಳಿಗೆ ನೇಮಕಾತಿ ನಡೆಸುತ್ತಿದೆ. ಮೊದಲಿಗೆ 168 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದ ಒಕ್ಕೂಟ, ಹೆಚ್ಚುವರಿಯಾಗಿ 25 ಹುದ್ದೆಗಳಿಗೂ ನೇಮಕಾತಿ ಅನುಮೋದನೆ ನೀಡಿತ್ತು. ನಂತರ ನಡೆದ ಲಿಖಿತ ಪರೀಕ್ಷೆ ವೇಳೆ ಅಕ್ರಮ ನಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ನೇಮಕಾತಿಗೆ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.