ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾಗಿದ್ದ 81 ವರ್ಷದ ಅಪರಾಧಿಗೆ ಒಂದು ವರ್ಷ ಕಾಲ ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವ ವಿಭಿನ್ನ ಶಿಕ್ಷೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಮಾರ್ಪಾಡು ಮಾಡಿ ಮೂರು ದಿನಕ್ಕೆ ಇಳಿಸಿದೆ. ಅಲ್ಲದೆ, ಒಂದು ವರ್ಷ ಮಿತನಡ್ಕ ಅಂಗನವಾಡಿಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಆದೇಶ ನೀಡಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಹೈಕೋರ್ಟ್ ಮೆಟ್ಟಿಲೇರಿದ ಐತಪ್ಪ.. ಅಪರಾಧಿಯ ವಿರುದ್ಧದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಬಂಟ್ವಾಳದ ಐತಪ್ಪ ನಾಯ್ಕ ಎಂಬುವರಿಗೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ಗಳ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಐತಪ್ಪ ನಾಯ್ಕ ಮೇಲ್ಮನವಿ ಸಲ್ಲಿಸಿದ್ದರು. ಆರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ರವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.
ಅರ್ಜಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದಂತೆ ಅವರು ಈಗಾಗಲೇ ಮೂರು ದಿನ ಸಾದಾ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅಲ್ಲದೆ, ಅವರಿಗೆ 81 ವರ್ಷ ವಯಸ್ಸಾಗಿದೆ, ಜತೆಗೆ ಅವರಿಗೆ ಮಕ್ಕಳಿಲ್ಲ, ವಯಸ್ಸಾಗಿರುವ ಪತ್ನಿಯ ಆರೋಗ್ಯವನ್ನು ನೋಡಿಕೊಳ್ಳಬೇಕಿದೆ. ಅವರೇ ಸಾಮಾಜಿಕ ಸೇವೆ ಸಲ್ಲಿಸಲು ಸಿದ್ಧ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಮನವಿ ಪರಿಗಣಿಸಿ ಶಿಕ್ಷೆ ಮಾರ್ಪಾಡು ಮಾಡಲಾಗುತ್ತಿದೆ ಎಂದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸಂಬಳವಿಲ್ಲದೆ ಒಂದು ವರ್ಷ ಕಾಲ ಸಮುದಾಯ ಸೇವೆ ಮಾಡಬೇಕೆಂಬ ಆದೇಶ ಅಲ್ಲದೆ, 2012ರ ಜೂ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜೆಎಂಎಫ್ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಆದೇಶವನ್ನು ಮಾರ್ಪಾಡು ಮಾಡಲಾಗುವುದು ಮತ್ತು ಅರ್ಜಿದಾರರು ಮೂರು ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು 10 ಸಾವಿರ ರೂ. ದಂಡ ಪಾವತಿಸಬೇಕು, ಜತೆಗೆ ಒಂದು ವರ್ಷ 2023ರ ಫೆ 20 ರಿಂದ ಅಂಗನವಾಡಿಯಲ್ಲಿ ಸಂಬಳವಿಲ್ಲದೆ ಸಮುದಾಯ ಸೇವೆ ಮಾಡಬೇಕು ಎಂದು ನ್ಯಾಯಾಲಯ ತನ್ನ ಆದೇಶಲ್ಲಿ ಉಲ್ಲೇಖಿಸಿದೆ.
ಮಕ್ಕಳಿಲ್ಲದ್ದು ಮತ್ತು ಅರ್ಜಿದಾರರ ವಯಸ್ಸು ಪರಿಗಣಿಸುವಂತೆ ವಕೀಲರ ಮನವಿ.. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಈ ಪ್ರಕರಣದಲ್ಲಿ ಅರ್ಜಿದಾರರ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಜತೆಗೆ ಅವರಿಗೆ ಮಕ್ಕಳಿಲ್ಲ ವೃದ್ಧ ಐತಪ್ಪ ನಾಯ್ಕ ಪತ್ನಿಯನ್ನು ನೋಡಿಕೊಳ್ಳಬೇಕಿದೆ. ತಪ್ಪು ಒಪ್ಪಿಕೊಂಡು ಸಾಮುದಾಯಿಕ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಹಾಗಾಗಿ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಅಂಶವನ್ನು ಪರಿಗಣಿಸಿರುವ ನ್ಯಾಯಪೀಠ ಶಿಕ್ಷೆಯನ್ನು ಮಾರ್ಪಾಡು ಮಾಡಿದೆ.
ಇದನ್ನೂ ಓದಿ: ಇಬ್ಬರು ಪಾಲದಾರಿಕೆ ಒಪ್ಪಂದದ ವಿವಾದವಿದ್ದಲ್ಲಿ, ಒಬ್ಬ ಪಾಲದಾರ ವ್ಯವಹಾರ ಮುಂದುವರೆಸುವಂತಿಲ್ಲ: ಹೈಕೋರ್ಟ್