ಬೆಂಗಳೂರು : ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಆರೋಪಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಪಡಿಸಿ ಆದೇಶಿಸಿದೆ.
ಆರೋಪಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ 35 ವರ್ಷದ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ಪೀಠ, ಈ ಮಹತ್ವದ ಆದೇಶ ಹೊರಡಿಸಿದೆ.
ಆರೋಪಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು ಮಾಡಿರುವುದಲ್ಲದೇ, ಆತನನ್ನು ಕೂಡಲೇ ವಶಕ್ಕೆ ಪಡೆದು ಜೈಲಿಗಟ್ಟುವಂತೆ ಸೂಚಿಸಿದೆ. ಹಾಗೆಯೇ, ಪ್ರಕರಣದ ವಿಚಾರಣೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಇತ್ಯರ್ಥಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ ಪತಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ನಡೆದಿರುವ ಆ್ಯಸಿಡ್ ದಾಳಿ ಅತ್ಯಂತ ಗಂಭೀರ ಸ್ವರೂಪದಿಂದ ಕೂಡಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಫೋಟೋಗಳಲ್ಲಿ ಕಾಣುವ ಗಾಯದ ಗುರುತುಗಳೇ ತಾಯಿ-ಮಗಳ ಮೇಲೆ ನಡೆದಿರುವ ದೌರ್ಜನ್ಯ ಬಿಂಬಿಸುತ್ತವೆ.
ವೈದ್ಯಕೀಯ ವರದಿಗಳ ಪ್ರಕಾರ ದಾಳಿಯಲ್ಲಿ ಮಹಿಳೆ ಮತ್ತು ಮಗುವಿನ ದೇಹದಲ್ಲಿ ಶೇ.20ರಿಂದ 25ರಷ್ಟು ಸುಟ್ಟ ಗಾಯಗಳಾಗಿವೆ. ಪ್ರಕರಣದ ತೀವ್ರತೆಯನ್ನು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಓದಿ : ಹಣ ಪಡೆದು ವಂಚನೆ: ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್
ಪ್ರಕರಣದ ಹಿನ್ನೆಲೆ : ಆ್ಯಸಿಡ್ ದಾಳಿಗೊಳಗಾಗಿರುವ ಮಹಿಳೆ ನೀಡಿರುವ ದೂರಿನಂತೆ ಸಂತ್ರಸ್ತೆಯ ಪತಿ ಇತ್ತೀಚೆಗೆ ಮೃತಪಟ್ಟಿದ್ದರು. ಹೀಗಾಗಿ, ಮಹಿಳೆ ಹಾಗೂ ಆಕೆಯ 2 ವರ್ಷದ ಮಗಳು ಪ್ರತ್ಯೇಕ ವಾಸಿಸುತ್ತಿದ್ದರು. ಹಾಗಿದ್ದೂ, ಪತಿಯ ಅಣ್ಣ ಕೆ. ಜಯಾನಂದ ಕಿರಿಯ ಸೋದರ ಬ್ಯಾಂಕ್ನಲ್ಲಿ ಮಾಡಿದ್ದ ಸಾಲದ ಕಂತನ್ನು ಮರುಪಾವತಿಸುವಂತೆ ನಾದಿನಿಗೆ ಒತ್ತಾಯಿಸುತ್ತಿದ್ದ.
ಆಗಾಗ ಮಹಿಳೆಯ ಮನೆಗೆ ನುಗ್ಗಿ ಹೋಗುತ್ತಿದ್ದ ಆರೋಪಿ ಹಣ ನೀಡುವಂತೆ ಪೀಡಿಸುತ್ತಿದ್ದ. ಸಾಲದ್ದೆಂಬಂತೆ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಇದೇ ವಿಚಾರವಾಗಿ ದಯಾನಂದ 2020ರ ಜನವರಿ 23ರಂದು ನಾದಿನಿ ಮನೆಗೆ ನುಗ್ಗಿ, ಮಗುವನ್ನು ಯಾರಿಗಾದರೂ ಮಾರಿ ತನ್ನೊಂದಿಗೆ ಬರುವಂತೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದ.
ಇವೆಲ್ಲವನ್ನೂ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದಾಗ ಕಿಟಕಿ ಮೂಲಕ ತನಗೂ ಹಾಗೂ ತನ್ನ ಎರಡು ವರ್ಷದ ಮಗಳ ಮೇಲೂ ಆ್ಯಸಿಡ್ ಎರಚಿದ ಎಂದು ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಸಂತ್ರಸ್ತೆಯ ಹೇಳಿಕೆ ಮೇರೆಗೆ ಕಡಬ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 534ಎ, 509, 504, 506, 448, 307, 236 ಅಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಬಳಿಕ ಪ್ರಕರಣದಲ್ಲಿ ಜಾಮೀನು ಕೋರಿ ಜಯಾನಂದ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, 2020ರ ಅಕ್ಟೋಬರ್ 8ರಂದು ಆರೋಪಿಯನ್ನು ಬಂಧಮುಕ್ತಗೊಳಿಸಿತ್ತು.
ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆರೋಪಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಹಾಗೂ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು. ಸಂತ್ರಸ್ತೆಯ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್ ಆರೋಪಿಯನ್ನು ಮತ್ತೆ ಜೈಲಿಗಟ್ಟಲು ನಿರ್ದೇಶಿಸಿದೆ.