ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲದಲ್ಲಿ ಸಕ್ರಿಯರಾಗಿರುವ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸಂಜನಾ ಸಲ್ಲಿಸಿರುವ ಅರ್ಜಿಯನ್ನು ನಿನ್ನೆ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಸಿಬಿ ಪರ ಎಸ್ಪಿಪಿ ವೀರಣ್ಣ ತಿಗಡಿ ಅವರು, ಸಂಜನಾ ವೈದ್ಯಕೀಯ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.
ವರದಿ ಗಮನಿಸಿದ ಪೀಠ, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದಿದ್ದಾರಲ್ಲ ಎಂದು ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಸಿಬಿ ಪರ ವಕೀಲ ವೀರಣ್ಣ ತಿಗಡಿ, ಸದ್ಯಕ್ಕೆ ಮೆಡಿಕೇಷನ್ನಲ್ಲಿ ಮುಂದುವರೆಯಬಹುದು. ಅಗತ್ಯ ಬಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಎಂದಿದ್ದಾರೆ ಎಂದು ವಿವರಿಸಿದರು. ಹಾಗೆಯೇ ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಓದಿ: ಅನಾರೋಗ್ಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ ಸಂಜನಾ: ವೈದ್ಯಕೀಯ ತಪಾಸಣೆಗೆ ಹೈಕೋರ್ಟ್ ಸೂಚನೆ
ಸಂಜನಾ ಗಲ್ರಾನಿ ತನಗೆ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇದೆ. ಚಳಿಗಾಲದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ. ಹಿಂದೊಮ್ಮೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದೆ. ಹೀಗಾಗಿ ಅಗತ್ಯ ಚಿಕಿತ್ಸೆ ಪಡೆಯಲು ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾಣಿವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಹಿಂದಿನ ವಿಚಾರಣೆ ವೇಳೆ ಸಂಜನಾಗೆ ಸೂಚಿಸಿತ್ತು.