ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿರುವ ತೀರ್ಪನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ ಪ್ರಕಟಿಸಲಿದೆ.
ಅವಧಿ ಮುಗಿದಿರುವ ಬಿಬಿಎಂಪಿಗೆ ಶೀಘ್ರವಾಗಿ ಚುನಾವಣೆ ನಡೆಸುವಂತೆ ಕೋರಿ ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಸದಸ್ಯ ಎಂ. ಶಿವರಾಜು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ನವೆಂಬರ್ 25ರಂದು ಪ್ರಕ್ರಿಯೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತ್ತು.
ಓದಿ: ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ
ವಿಚಾರಣೆ ಸಂದರ್ಭದಲ್ಲಿ ಅರ್ಜಿ ಮಹತ್ವದಾಗಿರುವುದರಿಂದ ಆದಷ್ಟು ಬೇಗ ಇತ್ಯರ್ಥಪಡಿಸುವುದಾಗಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದ ಕೋರ್ಟ್, ಬಿಬಿಎಂಪಿ ವಾರ್ಡ್ ಹೆಚ್ಚಳ ಮಾಡಲು ಚುನಾವಣೆ ಮುಂದೂಡಲಾಗಿದೆ ಎಂಬ ಸರ್ಕಾರದ ವಾದ ಸೂಕ್ತವಲ್ಲ ಎಂದಿತ್ತು. ಅಲ್ಲದೇ, ವಾರ್ಡ್ ಹೆಚ್ಚಿಸಲು ಜಾರಿಗೊಳಿಸಿರುವ ತಿದ್ದುಪಡಿ ಕಾಯ್ದೆಯನ್ನು ಬದಿಗಿಟ್ಟು ಈಗಿರುವ ವಾರ್ಡ್ಗಳಿಗೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬಹುದಲ್ಲವೇ? ಎಂದು ಪೀಠ, ಸರ್ಕಾರವನ್ನು ಪ್ರಶ್ನಿಸಿತ್ತು.