ಬೆಂಗಳೂರು: ಜನವರಿ 9ರಂದು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನಡೆಯಲಿರುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವ ಸಂಬಂಧ ಹೈಕೋರ್ಟ್ ಕೆಲ ವಿಶೇಷ ಸೂಚನೆಗಳನ್ನು ಹೊರಡಿಸಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಕೊರೊನಾ ಸೋಂಕಿಗೆ ತುತ್ತಾಗಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಕೋವಿಡ್ ಪರೀಕ್ಷಾ ವರದಿಯೊಂದಿಗೆ ಪ್ರಮಾಣಪತ್ರ ಅಥವಾ ಪರೀಕ್ಷೆಗೆ ಹಾಜರಾಗಲು ವೈದ್ಯರಿಂದ ಪಡೆದ ಫಿಟೆನೆಸ್ ಪ್ರಮಾಣಪತ್ರವನ್ನು ರಿಜಿಸ್ಟ್ರಾರ್‌ಗೆ ಮುಂಚಿತವಾಗಿ ಇ-ಮೇಲ್ ಮೂಲಕ ನೀಡಬೇಕು.
ಕಂಟೈನ್ಮೆಂಟ್ ವಲಯದಲ್ಲಿರುವ, ಕೊರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಒಳಗಾದ ಅಭ್ಯರ್ಥಿಗಳು ಮುಂಚಿತವಾಗಿಯೇ ಅಗತ್ಯ ದಾಖಲೆಗಳೊಂದಿಗೆ ಇ-ಮೇಲ್ ಮಾಡಬೇಕು. ಇದು ಪರೀಕ್ಷೆ ವೇಳೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಫಿಕೇಷನ್ ಹೊರಡಿಸಿದ್ದಾರೆ.
ಹಾಗೆಯೇ, ತಾವು ಕಂಟೈನ್ಮೆಂಟ್ ವಲಯದಿಂದ ಬಂದಿಲ್ಲ. ಕೊರೊನಾ ಸಂಕೋಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಒಳಗಾಗಿಲ್ಲ. ತಮ್ಮ ಕುಟುಂಬದ ಸದಸ್ಯರಿಗೆ ಕೋವಿಡ್ ಲಕ್ಷಣಗಳಿಲ್ಲ ಮತ್ತು ಕೊರೊನಾ ಸೋಂಕಿಗೆ ತುತ್ತಾಗಿಲ್ಲ ಎಂದು ಸ್ವಯಂಘೋಷಿತ ಪ್ರಮಾಣಪತ್ರವನ್ನು ಎಲ್ಲಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ನೀಡಬೇಕು. ಅಭ್ಯರ್ಥಿಗಳು ಆರೋಗ್ಯ ಸೇತು, ಆಪ್ತಮಿತ್ರ ಮತ್ತು ಕ್ವಾರಂಟೈನ್ ವಾಚ್ ಆ್ಯಪ್‌ಗಳನ್ನು ಡೌನ್‌ಲೋಡ್ ಹಾಗೂ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಇರುವ ವೇಳೆ ಮೊಬೈಲ್ನಲ್ಲಿ ಲೊಕೇಷನ್ ಮತ್ತು ಬ್ಲೂಟೂತ್ ಎನೇಬಲ್ ಮಾಡಿಕೊಂಡಿರಬೇಕು ಎಂದು ತಿಳಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸಾರ್ವಜನಿಕ ವಾಹನದಲ್ಲಿ ರಾತ್ರಿ ಪ್ರಯಾಣಿಸಿದರೆ, ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ವೇಳೆ ಶುಭ್ರ ಉಡುಪು ಧರಿಸಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಇದ್ದಷ್ಟು ಹೊತ್ತು ಹೊಸ ಎನ್-95 ಮಾಸ್ಕ್ ಹಾಕಿಕೊಳ್ಳಬೇಕು.
ಎನ್-95 ಮಾಸ್ಕ್ ಧರಿಸದ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸಲು ಅನುಮತಿಸುವುದಿಲ್ಲ. ಪರೀಕ್ಷೆ ಬರೆಯುವಾಗ ಮಾಸ್ಕ್ ತೆಗೆಯುವಂತಿಲ್ಲ. ಪರೀಕ್ಷೆಗೂ ಮುನ್ನ ಮತ್ತು ನಂತರ ಅಭ್ಯರ್ಥಿಗಳು ಕೇಂದ್ರದ ಒಳಗೆ ಹಾಗೂ ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೆಡಿಕಲ್ ಸ್ಕ್ರೀನಿಂಗ್ ತಂಡ ಮತ್ತು ಅರೆ ವೈದ್ಯಕೀಯ ಸ್ವಯಂ ಸೇವಕರೊಂದಿಗೆ ಸೂಕ್ತವಾಗಿ ಸಹಕರಿಸಬೇಕೆಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.