ಬೆಂಗಳೂರು: ಕೊರೊನಾ ಸೋಂಕು ಕ್ಷೀಣಿಸುತ್ತಿರುವ ಹಿನ್ನೆಲೆ ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಿಗೆ ಈ ಹಿಂದೆ ಜಾರಿಗೊಳಿಸಲಾಗಿದ್ದ ಮಾರ್ಗಸೂಚಿಗಳನ್ನು ಫೆ. 22ರಿಂದ ಅನ್ವಯವಾಗುವಂತೆ ಹಿಂಪಡೆಯಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಪ್ರಕಟಣೆ ಹೊರಡಿಸಿದ್ದಾರೆ. ಈ ಆದೇಶ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಬೆಂಗಳೂರು ಪೀಠಕ್ಕೆ ಹಿಂದೆ ನಿಗದಿಪಡಿಸಿರುವ ಮಾರ್ಗಸೂಚಿಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ. ಹಾಗಿದ್ದೂ ಮೂರು ಪೀಠಗಳಲ್ಲಿ ಸಿಬ್ಬಂದಿ, ವಕೀಲರು ಸೇರಿದಂತೆ ನ್ಯಾಯಾಲಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಕೋರ್ಟ್ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧವಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೇ, ರಾಜ್ಯದ ಎಲ್ಲಾ ಕೋರ್ಟ್ ಆವರಣಗಳಲ್ಲಿ ಸಿಬ್ಬಂದಿ, ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸಾಧ್ಯವಿದ್ದಷ್ಟು ಪ್ರತ್ಯೇಕ ಪ್ರವೇಶ-ನಿರ್ಗಮನ ದ್ವಾರಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿದೆ. ಬೆಂಗಳೂರು ಪ್ರಧಾನ ಪೀಠದಲ್ಲಿ ಕಕ್ಷಿದಾರರು ಕೋರ್ಟ್ ಹಾಲ್ ಪ್ರವೇಶಕ್ಕೆ ತಮ್ಮ ವಕೀಲರಿಂದ ನಿಗದಿತ ನಮೂನೆಯಲ್ಲಿ ಪತ್ರ ಪಡೆದಿರಬೇಕು ಮತ್ತು ಪಾರ್ಟಿ ಇನ್ ಪರ್ಸನ್ಸ್ ಕಾಸ್ ಲಿಸ್ಟ್ನಲ್ಲಿ ತಮ್ಮ ಹೆಸರು ಇರುವುದನ್ನು ತೋರಿಸಬೇಕು ಎಂದು ಸೂಚಿಸಲಾಗಿದೆ.