ಬೆಂಗಳೂರು: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ದಾಖಲಿಸಿರುವ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯನ್ನು ರಾಮನಗರದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ಕೋರಿ ದೂರುದಾರ ಲೆನಿನ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾ. ಬಿ ಎ ಪಾಟೀಲ್ ಅವರಿದ್ದ ಪೀಠ ಈಗಾಗಲೇ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದೆ. ಅರ್ಜಿದಾರರ ಕೋರಿಕೆ ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಈ ಮನವಿಯನ್ನು ತಿರಸ್ಕರಿಸಿದೆ. ಜತೆಗೆ ಪ್ರಕರಣದ ವಿಚಾರಣೆಯನ್ನು ರಾಮನಗರದ ನ್ಯಾಯಾಲಯವೇ ಮುಂದುವರೆಸಲು ಸೂಚಿಸಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ:
ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಭಕ್ತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ದಾಖಲಾಗಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರದ 3 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದರೆ, ದೂರುದಾರ ವಿಚಾರಣೆಗೆ ಹಾಜರಾಗಿಲ್ಲ, ಅವರನ್ನೇ ಬಂಧಿಸುವಂತೆ ರಾಮನಗರ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.
ಆರೋಪಿ ನಿತ್ಯಾನಂದ ಜಾಮೀನು ಪಡೆದುಕೊಳ್ಳುವ ವೇಳೆ ವಿಧಿಸಿದ್ದ ನಿಯಮಗಳನ್ನು ಉಲ್ಲಂಘಿಸಿ ದೇಶ ಬಿಟ್ಟು ಹೋಗಿದ್ದಾರೆ. ಈವರೆಗೂ ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಆರೋಪಿಯೇ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಹಾಗಿದ್ದೂ ವಿಚಾರಣಾ ನ್ಯಾಯಾಲಯ ದೂರುದಾರ ವಿಚಾರಣೆಗೆ ಹಾಜರಾಗಿಲ್ಲ ಎಂದು ಲೆನಿನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು. ಹೀಗಾಗಿ ಪ್ರಕರಣವನ್ನು ರಾಮನಗರದ ಬದಲು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ಲೆನಿನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು.