ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ನಮ್ಮನ್ನು ಜೈಲಿಗೆ ಕಳುಹಿಸುತ್ತಾರೆ, ಆದರೆ, ಮುಸ್ಲಿಮರು ಕೊಂದು ಬಿಡುತ್ತಾರೆ ಎಂಬುದಾಗಿ ಪರಿಶಿಷ್ಟ ಜಾತಿಗೆ ಸೇರಿದ ಸಹೊದ್ಯೋಗಿಯೊಬ್ಬರನ್ನು ಸಾರ್ವಜನಿಕ ಸ್ಥಳದಲ್ಲಿ ಜಾತಿ ಹೆಸರಿನಲ್ಲಿ ನಿಂದಿಸಿ ಅವಮಾನ ಮಾಡಿದ್ದ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ(ಐಸೆಕ್) ನಿರ್ದೇಶಕರಾಗಿದ್ದ ಡಾ.ಎಂ.ಜಿ.ಚಂದ್ರಕಾಂತ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಮತ್ತು ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಐಸೆಕ್ ನಿರ್ದೇಶಕರಾಗಿದ್ದ ಡಾ.ಎಂ.ಜಿ.ಚಂದ್ರಕಾಂತ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಎ.ವಿ.ಮಂಜುನಾಥ್ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ, ಚಂದ್ರಕಾಂತ್ ವಿರುದ್ಧದ ಪ್ರಕರಣ ರದ್ದು ಮಾಡುವುದಕ್ಕೆ ನಿರಾಕರಿಸಿದೆ.
ಪ್ರಕರಣದಲ್ಲಿ ಎರಡನೇಯವರಾದ ಮಂಜುನಾಥ್ ಅವರು, ಪರಿಶಿಷ್ಟ ಜಾತಿಗೆ ಸೇರಿದ ಪ್ರಾಧ್ಯಾಪಕರ ಕಚೇರಿಯಲ್ಲಿ ನಿಂದನೆ ಮಾಡಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಆದರೆ, ಮೊದಲ ಆರೋಪಿ ಚಂದ್ರಕಾಂತ್ ಅವರು ಐಸೆಕ್ ಸಂಸ್ಥೆಯಲ್ಲಿಯ ಪಿಎಚ್‌ಡಿ ವಿದ್ಯಾರ್ಥಿಗಳ ಎದುರಿನಲ್ಲಿ ಪಿಎಚ್‌ಡಿ ಹಾಸ್ಟೆಲ್ ಮುಂಭಾಗದಲ್ಲಿ ಜಾತಿ ನಿಂದನೆ ಮಾಡಿರುವುದು ಸಾಕ್ಷ್ಯಾಧಾರಗಳು ಸಾಬೀತುಪಡಿಸುತ್ತಿವೆ. ಆದ್ದರಿಂದ ಆರೋಪಿ ವಿರುದ್ಧ ಆರೋಪದ ಕುರಿತು ವಿಚಾರಣೆ ನಡೆಯ ಬೇಕಾದ ಅಗತ್ಯವಿದೆ. ಹೀಗಾಗಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಂಜುನಾಥ್, ಕಚೇರಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಆದರೆ, ಇದು ಸಾರ್ವಜನಿಕ ಸ್ಥಳವಾಗಿರಲಿಲ್ಲ. ಇದು ಕಚೇರಿಗೆ ಮಾತ್ರ ಸೀಮಿತವಾಗಿದೆ. ಮೊದಲ ಆರೋಪಿ ಚಂದ್ರಕಾಂತ್‌ಗೆ ಜಾತಿ ನಿಂದನೆ ಮಾಡಿ ದೂರುದಾರಿಗೆ ನೋವುಂಟು ಮಾಡಬೇಕು ಎಂಬ ಉದ್ದೇಶವಿರಲಿಲ್ಲ. ದೂರುದಾರರು ರವಾನಿಸಿದ್ದ ಇ-ಮೇಲ್‌ನಲ್ಲಿಯೂ ಜಾತಿ ನಿಂದನೆ ಮಾಡಿರುವ ಸಂಬಂಧ ಯಾವುದೇ ಅಂಶ ಉಲ್ಲೇಖವಾಗಿರಲಿಲ್ಲ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ದೂರುದಾರರ ಪರ ವಕೀಲರು ವಾದ ಮಂಡಿಸಿ, ಇ-ಮೇಲ್ ಮತ್ತು ದೂರುದಾರರು ನಿಡಿದ್ದ ನೋಟಿಸ್‌ಗೆ ಉತ್ತರಿಸುವ ಸಂದರ್ಭದಲ್ಲಿ ಘಟನೆಯ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ಸತ್ಯಾಂಶವಿದ್ದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ತನಿಖೆ ನಡೆಸಿರುವ ತನಿಖಾಧಿಕಾರಿಗಳು ನಡೆಸಿರುವ ತನಿಖೆಯಲ್ಲಿ ಘಟನೆಗೆ ಸಾಕ್ಷ್ಯಾಧಾರಗಳಿವೆ. ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಮಡಿದ್ದಾರೆ. ಎಲ್ಲ ಸಾಕ್ಷ್ಯಾಧಾರಗಳು ಆರೋಪಕ್ಕೆ ಪುಷ್ಠೀಕರಿಸಿವೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ ಏನು: 2018ರ ಅಕ್ಟೋಬರ್ ತಿಂಗಳಲ್ಲಿ ಐಸೆಕ್‌ನಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಡಾ.ಕೃಷ್ಣಪ್ಪ್ಪ(ಪರಿಶಿಷ್ಟ ಜಾತಿಗೆ ಸೇರಿದವರು, ಹೆಸರು ಬದಲಿಸಲಾಗಿದೆ) ಅವರು ಸಂಸ್ಥೆಯ ಕಚೇಯಲ್ಲಿದ್ದ ವೇಳೆ ಒಳಗೆ ಬಂದಿದ್ದ ಪ್ರಕರಣದ ಎರಡನೇ ಆರೋಪಿ ಎ.ವಿ.ಮಂಜುನಾಥ್, ಜಾತಿ ಹೆರಿನಲ್ಲಿ ನಿಂದನೆ ಮಾಡಿ ಅಸಾಂವಿಧಾನಿಕ ಪದಗಳನ್ನು ಬಳಕೆ ಮಾಡಿದ್ದರು.
ಈ ಕುರಿತು ಕೃಷ್ಣಪ್ಪ, ಸಂಸ್ಥೆಯ ನಿರ್ದೇಶಕರಾಗಿದ್ದ ಚಂದ್ರಕಾಂತ್ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಜತೆಗೆ, ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬೆಳವಣಿಗೆ ಚಂದ್ರಕಾಂತ್ ಅವರ ಪ್ರಭಾವದಿಂದಲೇ ಮಂಜುನಾಥ್ ಅವರು ಈ ರೀತಿಯಲ್ಲಿ ಮಾತನಡುತ್ತಿದ್ದರು. ಆದ್ದರಿಂದ ದೂರನ್ನು ನಿರ್ಲಕ್ಷಿಸಿದ್ದರು ಎಂದು ಕೃಷ್ಣಪ್ಪ ಅಭಿಪ್ರಾಯಕ್ಕೆ ಬಂದಿದ್ದರು. ಅಷ್ಟೇ ಅಲ್ಲದೆ, ಚಂದ್ರಕಾಂತ್ ಅವರು ಹಲವು ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಗಳ ಬಗ್ಗೆ ಅತ್ಯಂತ ತುಚ್ಚವಾಗಿ ಮಾತನಾಡಿದ್ದರು.
ಜತೆಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ನಮ್ಮನ್ನು ಜೈಲಿಗೆ ಕಳುಹಿಸುತ್ತಾರೆ. ಆದರೆ, ಮುಸ್ಲಿಮರು ಕೊಂದು ಬಿಡುತ್ತಾರೆ ಎಂಬುದಾಗಿ ಹೇಳಿದ್ದರು. ಇದಕ್ಕೆ ಸಂಸ್ಥೆಯ ಹಲವು ಸಿಬ್ಬಂದಿ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ಈ ಸಂಬಂಧ ಕೃಷ್ಣಪ್ಪ 2019ರ ಜನವರಿ 4ರಂದು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ದೌರ್ಜನ್ಯ ತಡೆ ಕಾಯಿದೆಯಡಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಎಫ್‌ಐಆರ್ ಮತ್ತು ವಿಚಾರಣೆ ರದ್ದು ಕೋರಿ ಆರೋಪಿತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಷರತ್ತು ಉಲ್ಲಂಘಿಸಿದ ನೈಜಿರಿಯಾ ಪ್ರಜೆಗೆ ಜಾಮೀನು ರದ್ದುಗೊಳಿಸಿದ ಹೈಕೋರ್ಟ್