ಬೆಂಗಳೂರು: ಓಲಾ ಕ್ಯಾಬ್ಗಳಲ್ಲಿ ಸಿನಿಮಾ ಹಾಡುಗಳ ಪ್ರಸಾರ ಸಂಬಂಧ ಲಹರಿ ಆಡಿಯೋ ಸಂಸ್ಥೆ ನೀಡಿದ್ದ ದೂರು ಆಧರಿಸಿ ಕಾಪಿ ರೈಟ್ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ರದ್ದು ಕೋರಿ ಎನ್ಎಐ ಖಾಸಗಿ ಕಂಪನಿ (ಓಲಾ ಕ್ಯಾಬ್ ಎಂದೇ ಹೆಸರುವಾಸಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಓಲಾ ಸಂಸ್ಥೆಯ ನಿರ್ದೇಶಕರಾದ ಭವಿಶ್ ಅಗರವಾಲ್ ಮತ್ತು ಅಂಕಿತ್ ಭಾಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ, ಕಾಪಿ ರೈಟ್ ಕಾಯ್ದೆಯ ಸೆಕ್ಷನ್ 63ರಡಿ ಸಕ್ಷಮ ನ್ಯಾಯಾಲಯ ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ, ಪೊಲೀಸರು ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿರುವ ಕ್ರಮ ಸರಿ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿದೆ.
ಓದಿ: ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ : ವಿಳಂಬ ಚಿಕಿತ್ಸೆಯೇ ಕಾರಣ?
ಪ್ರಕರಣದ ಹಿನ್ನೆಲೆ: ಓಲಾ ಕ್ಯಾಬ್ಗಳಲ್ಲಿ ಟಿವಿ/ಡಿಸ್‌ಪ್ಲೇ ಸೆಟ್ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಜನಪ್ರಿಯ ಚಿತ್ರಗೀತೆಗಳ ವಿಡಿಯೋ ಮತ್ತು ಆಡಿಯೋ ಪ್ರಸಾರ ಮಾಡಲಾಗಿತ್ತು. ಇದು ಕಾಪಿ ರೈಟ್ ಕಾಯ್ದೆಯಡಿ ಉಲ್ಲಂಘನೆಯಾಗಿತ್ತು.
ಓಲಾ ಕಂಪನಿ ತಮ್ಮ ಅನುಮತಿ ಪಡೆಯದೇ ತಮ್ಮ ಕಾಪಿ ರೈಟ್ ಹೊಂದಿರುವ ಹಾಡುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಲಹರಿ ರೆಕಾರ್ಡಿಂಗ್ ಕಂಪನಿ 2017ರ ಮೇ 13ರಂದು ದೂರು ನೀಡಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತರು ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದ್ದರು. ಇದನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ