ಬೆಂಗಳೂರು: ಪತ್ನಿ ಕೊಲೆ ಮಾಡಿದ್ದ ಅಪರಾಧಿಯೊಬ್ಬರ ಜೀವಾವಧಿ ಶಿಕ್ಷೆಯನ್ನು ಏಳು ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಾಡು ಮಾಡಿ ಹೈಕೋರ್ಟ್ ಆದೇಶಿಸಿದೆ. ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ (39) ಎಂಬುವರು ಹೈಕೋರ್ಟ್ನಲ್ಲಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅಪರಾಧಿ ತನ್ನ ಹೆಣ್ಣು ಮಕ್ಕಳ ಹೆಸರಿಗೆ 3 ಲಕ್ಷ ರೂ.ಗಳ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ಪತ್ನಿ ಮತ್ತೊಬ್ಬರೊಂದಿಗೆ ಇದ್ದುದ್ದನ್ನು ನೋಡಿದ್ದರು. ಇದರಿಂದ ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಈ ಹತ್ಯೆ ನಡೆಸಿದ್ದಾರೆ. ಜೊತೆಗೆ, ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದ. ಹೆಂಡತಿಯನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷೆ ರದ್ದು ಮಾಡಬೇಕು ಎಂದು ಕೋರಿದ್ದರು. ವಾದವನ್ನು ಪರಿಗಣಿಸಿದ ನ್ಯಾಯಪೀಠ, ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ? ದೊಡ್ಡಬಳ್ಳಾಪುರದ ತಾಲೂಕಿನ ದೊಡ್ಡಬೆಳವೆಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ ರಾಜೇಶ್ ಎಂಬುವರು ಇದೇ ತಾಲೂಕಿನ ತಪಸೀಹಳ್ಳಿಯ ಮಹಿಳೆಯ ಜೊತೆ 2010ರ ಅಕ್ಟೋಬರ್ 22ರಂದು ವಿವಾಹವಾಗಿದ್ದರು. ನಂತರ ಉಂಟಾದ ವ್ಯಾಜ್ಯದಲ್ಲಿ ರಾಜೇಶ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 498ಎ ಅನುಸಾರ ಪ್ರಕರಣ ದಾಖಲಿಸಲಾಗಿತ್ತು. ಜೀವನ ನಿರ್ವಹಣೆಗಾಗಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ನ್ಯಾಯಾಲಯ ಪ್ರತಿ ತಿಂಗಳೂ 2 ಸಾವಿರ ರೂ.ಗಳ ಪರಿಹಾರ ನೀಡುವಂತೆ ರಾಜೇಶ್ಗೆ ಆದೇಶಿಸಿತ್ತು.
ಇದಾದ ನಂತರ ಗ್ರಾಮದ ಹಿರಿಯರು ಹಾಗೂ ಕುಟುಂಬಸ್ಥರು ನಡೆಸಿದ್ದ ರಾಜಿ ಪಂಚಾಯಿತಿಯಲ್ಲಿ ಪತ್ನಿಗೆ ಬೇರೆ ಮನೆ ಕಟ್ಟಿಸಿಕೊಡುವಂತೆ ಹೇಳಿದ್ದನ್ನು ರಾಜೇಶ ಒಪ್ಪಿದ್ದರು. ಇದಕ್ಕೆ ಅನುಗುಣವಾಗಿ ಹೊಸ ಮನೆ ಕಟ್ಟಿಸಿಕೊಟ್ಟಿದ್ದರು. 2018ರ ಫೆಬ್ರುವರಿ 8ರಂದು ತವರು ಮನೆಯಿಂದ ಗಂಡನ ಮನೆಗೆ ಮಹಿಳೆ ಬಂದಿದ್ದರು. ಅಂದು ಬೆಳಗಿನ ಜಾವ 4 ಗಂಟೆಯಲ್ಲಿ ಪತ್ನಿ ಪಕ್ಕದಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ್ದ ರಾಜೇಶ್, ಹುಡುಕಿಕೊಂಡು ಹೊರಟಿದ್ದರು.
ಈ ವೇಳೆ ವಾಣಿಗರಹಳ್ಳಿ ಬಳಿ ಹೊಲದಲ್ಲಿ ಯಾರೋ ಮಾತನಾಡುವುದು ಕೇಳಿಸಿ, ಒಳ ಹೋಗಿ ನೋಡಿದಾಗ, ಪತ್ನಿ ಪರಪುರುಷನ ಜೊತೆಯಲ್ಲಿ ಇರುವುದನ್ನು ಕಂಡು ಕುಪಿತರಾಗಿದ್ದರು. ಅವಳು ತೊಟ್ಟಿದ್ದ ವೇಲ್‌ನಿಂದಲೇ ಅವಳ ಕುತ್ತಿಗೆಯನ್ನು ಬಿಗಿದು ಅವಳನ್ನು ಸಾಯಿಸಿದ್ದರು. ಈ ವೇಳೆ ಆಕೆಯ ಜೊತೆಗಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದ. ಪತ್ನಿಯ ದೇಹವನ್ನು ರಾಜೇಶ್ ಅಲ್ಲೇ ಮರದ ಬುಡದಲ್ಲಿ ಎಲೆಗಳಲ್ಲಿ ಮುಚ್ಚಿಟ್ಟಿದ್ದ. ಇದಾದ ಬಳಿಕ ಕತ್ತಿಯಿಂದ ಹೆಣವನ್ನು ನಾಲ್ಕು ಭಾಗಗಳಾಗಿ ತುಂಡರಿಸಿದ್ದರು. ನಂತರ ಅಲ್ಲೇ ಇದ್ದ ಗುಂಡಸಂದ್ರ ಕೆರೆ ಪೈಪ್‌ಲೈನ್ ಜಾಗದಲ್ಲಿ ನೆಲ ಅಗೆದು ಮಣ್ಣಿನಲ್ಲಿ ಆ ತುಂಡುಗಳನ್ನು ನಾಲ್ಕು ಜಾಗಗಳಲ್ಲಿ ಹೂತು ಹಾಕಿದ್ದರು.
ನಂತರ ಗಾಬರಿಯಿಂದ ರಾಜೇಶ್ ಸ್ನೇಹಿತ ರಾಜಣ್ಣನಿಗೆ ತಿಳಿಸಿದ್ದ. ರಾಜಣ್ಣ ದಾಖಲಿಸಿದ ದೂರಿನ ಮೇರೆಗೆ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ, ಆರೋಪಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ 45 ಸಾವಿರ ರೂ ದಂಡ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮಕ್ಕಳ ಸುಪರ್ದಿ ಹಂಚಿಕೆ ವಿಚಾರದಲ್ಲಿ ಸೋಲುವ ಪೋಷಕರಿಗೆ ಮಕ್ಕಳ ಭೇಟಿ ಅವಕಾಶ ಕಲ್ಪಿಸಬೇಕು: ಹೈಕೋರ್ಟ್