ಬೆಂಗಳೂರು : ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ಶೀಘ್ರ ವಿಚಾರಣೆ ನಡೆಸಿ ನ್ಯಾಯಧಾನ ಮಾಡುವ ಸಲುವಾಗಿ ರಾಜ್ಯದ ಇತರ ಕಂದಾಯ ವಿಭಾಗಗಳಾದ ಬೆಳಗಾವಿ, ಕಲಬುರಗಿ ಮತ್ತು ಮೈಸೂರಿನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಗಳನ್ನು ಮುಂದಿನ ಆರು ತಿಂಗಳಲ್ಲಿ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.
ಹುಬ್ಬಳ್ಳಿ ಗಲಭೆ ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶೋಹಿಬ್ ಸೇರಿದಂತೆ ಇತರೆ 40 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್‌ಐಎ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಸಕಾಲಕ್ಕೆ ನ್ಯಾಯವನ್ನು ಒದಗಿಸುವುದು ನ್ಯಾಯಾಲಯ ಕರ್ತವ್ಯ: ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಒಂದು ವಿಶೇಷ ನ್ಯಾಯಾಲಯ ರಚನೆ ಮಾಡಿದೆ. ಎನ್‌ಐಎ ಪ್ರಕರಣಗಳನ್ನು ಪರಿಶೀಲಿಸಿದಾಗ ಸುಮಾರು 8 ರಿಂದ 9 ವರ್ಷಗಳ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಾಂಗ ಪ್ರಸ್ತುತ ಸಾರ್ವಜನಿಕರ ನಂಬಿಕೆಯ ಅಂತಿಮ ಹಾಗೂ ಕೊನೆಯ ಕೇಂದ್ರ ಬಿಂದುವಾಗಿದೆ. ಎಲ್ಲ ಕಡೆಗಳಲ್ಲಿ ನ್ಯಾಯ ಲಭ್ಯವಾಗದಿದ್ದಾಗ ಜನ ಅಂತಿಮವಾಗಿ ನ್ಯಾಯಾಲಯದ ಕದ ತಟ್ಟುತ್ತಾರೆ. ಧರ್ಮ, ಜಾತಿ ಲಿಂಗ ಅಥವಾ ಜನ್ಮ ಸ್ಥಳವನ್ನು ಲೆಕ್ಕಿಸದೆ ಪ್ರತಿಯೊಬ್ಬರು ಗೌರವಿಸುವ ಸ್ಥಳವೇ ನ್ಯಾಯಾಲಯವಾಗಿದೆ. ಇತರ ಅಧಿಕಾರಗಳಿಗಿಂತಲೂ ನ್ಯಾಯಾಂಗಕ್ಕೆ ಹೆಚ್ಚು ಅಧಿಕಾರವಿದ್ದು, ಕಟ್ಟುನಿಟ್ಟಿನ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ, ನ್ಯಾಯಾಂಗದ ಮೊರೆ ಹೋಗುವವರಿಗೆ ಸಕಾಲಕ್ಕೆ ನ್ಯಾಯವನ್ನು ಒದಗಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ.
ಹೀಗಾಗಿ, ಜನತೆಗೆ ಶೀಘ್ರ ಮತ್ತು ತ್ವರಿತ ನ್ಯಾಯಾಧಾನ ಮಾಡುವುದಕ್ಕೆ ರಾಜ್ಯದ ಇತರೆ ಕಂದಾಯ ವಿಭಾಗಗಳಾದ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚನೆ ಮಾಡುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ಪೀಠ ತಿಳಿಸಿದೆ. ಹೊಸದಾಗಿ ಪ್ರಸ್ತಾಪಿಸಿರುವ ವಿಶೇಷ ನ್ಯಾಯಾಲಯಗಳಿಗೆ ಎನ್‌ಐಎ ಪ್ರಕರಣಗಳು ಕಡಿಮೆ ಇದ್ದಲ್ಲಿ ಇತರೆ ಪ್ರಕರಣಗಳನ್ನು ನಿಯೋಜಿಸಬಹುದಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಎನ್‌ಐಎ ಜತೆಗೆ ಇತರೆ ಪ್ರಕರಣಗಳನ್ನು ವಿಚಾರಣೆ ನಡೆಸಲು ನಿಯೋಜಿಸಲಾಗಿದೆ. ಇದರಿಂದ ಎನ್‌ಐಎ ಪ್ರಕರಣಗಳ ವಿಚಾರಣೆ ವಿಳಂಬಕ್ಕೆ ಕಾರಣವಾಗುತ್ತಿದೆ.
ಅಲ್ಲದೆ, ಹೊಸದಾಗಿ ವಿಶೇಷ ನ್ಯಾಯಾಲಯಗಳ ರಚನೆ ಮಾಡದಿದ್ದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮೇಲೆ ಹೊರೆ ಹೆಚ್ಚಾಗಲಿದೆ. ಇದು ಸಂವಿಧಾನದ ಪರಿಚ್ಚೇದ 14 (ಸಮಾನತೆ) ಮತ್ತು 21 (ತ್ವರಿತ ವಿಚಾರಣೆ) ಹಕ್ಕುಗಳಿಗೆ ವಿರುದ್ಧವಾಗಲಿದೆ. ಆದ್ದರಿಂದ ಶೀಘ್ರದಲ್ಲಿ ಇತರ ವಿಶೇಷ ನ್ಯಾಯಾಲಯ ರಚನೆ ಮಾಡಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ.
ಸಂವಿಧಾನದ ಪರಿಚ್ಚೇದ 21ರ ಪ್ರಕಾರ, ಯಾವುದೇ ಆರೋಪಿ ತ್ವರಿತ ನ್ಯಾಯದಾನದ ಹಕ್ಕು ಹೊಂದಿದ್ದರೆ, ಈ ಹಕ್ಕು ವಿಚಾರಣೆ ಮೇಲ್ಮನವಿ, ಪರಿಷ್ಕರಣೆ ಮತ್ತು ಮರು ವಿಚಾರಣೆ ಸೇರಿದಂತೆ ಎಲ್ಲ ಹಂತಗಳನ್ನು ಒಳಗೊಂಡಿರುತ್ತದೆ. ತ್ವರಿತ ವಿಚಾರಣೆ ಸಾರ್ವಜನಿಕ, ಸಾಮಾಜಿಕ ಹಿತಾಸಕ್ತಿಯನ್ನೂ ಒಳಗೊಂಡಿದೆ ಎಂದ ಮಾತ್ರಕ್ಕೆ ಆರೋಪಿಯ ಹಕ್ಕನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅರೋಪಿತರು ಅನಗತ್ಯವಾಗಿ ದೀರ್ಘಕಾಲ ಸೆರೆವಾಸ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಶೀಘ್ರ ವಿಚಾರಣೆ ಅಗತ್ಯವಿದ್ದು, ಹೊಸ ನ್ಯಾಯಾಲಯಗಳ ರಚನೆ ಅಗತ್ಯವಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? : ವ್ಯಕ್ತಿಯೊಬ್ಬರು ಇಸ್ಲಾಂ ಧರ್ಮಕ್ಕೆ ಅವಮಾನವಾಗುವಂತಹ ಹೇಳಿಕೆಯೊಂದನ್ನು ತನ್ನ ಮೊಬೈಲ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುಮಾರು 100ಕ್ಕೂ ಹೆಚ್ಚು ಮಂದಿ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮನವೊಲಿಸಿದರೂ ಹಿಂಜರಿಯದೆ ದಾಂದಲೆ ನಡೆಸಿದ್ದರು. ಅಲ್ಲದೆ, ಪೊಲೀಸರ ಕರ್ತವಕ್ಕೆ ಅಡ್ಡಿಪಡಿಸಿದ್ದರು.
ಜತೆಗೆ ಚಪ್ಪಲಿ ಹಾಗೂ ಕಲ್ಲುಗಳಿಂದ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯ ಮೇಲೆ ಎಸೆದಿದ್ದರು. ಸರ್ಕಾರಿ ವಾಹನಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಜಖಂಗೊಳಿಸಿದ್ದರು. ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಆರೋಪ ಸಂಬಂಧ ಸುಮಾರು 140ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎನ್‌ಐಎ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 29 ಲಕ್ಷ ರೂ.ಗಳ ದುರುಪಯೋಗ, 28 ವರ್ಷ ಕಳೆದರೂ ಕ್ರಮಕ್ಕೆ ಮುಂದಾಗದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ