ಬೆಂಗಳೂರು: ಅಂತಾರಾಷ್ಟ್ರೀಯ ಸಂಸ್ಥೆಗಳು ದೇಶೀಯ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದೇ ಎಂಬುದರ ಕುರಿತು ಸೂಕ್ತ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಟ್ವಿಟ್ಟರ್ ಸಂಸ್ಥೆಗೆ ಸೂಚಿಸಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬಳಕೆದಾರರ ಕೆಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶ ಮಾಡಿರುವುದನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ, ಸಂವಿಧಾನದ 226ನೇ ವಿಧಿಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಗೆ ಯಾವುದೇ ಸೀಮಿತವಿಲ್ಲ. ತನ್ನ ಹಕ್ಕುಗಳ ಸ್ಥಾಪನೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಸಂವಿಧಾನದ 14ನೇ ವಿಧಿಯ ಅಡಿ ಹಕ್ಕನ್ನು ಕೇಳಬಹುದಾಗಿದೆ. ಹೀಗಾಗಿ, 226ನೇ ವಿಧಿಯಡಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಬಂಧ ವಿಧಿಸಲಾಗಿಲ್ಲ ಎಂದು ವಿವರಿಸಿದರು.
ಅಲ್ಲದೆ, ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸುವ ಆದೇಶಕ್ಕೆ ಸರ್ಕಾರ ಸೂಕ್ತ ಕಾರಣಗಳನ್ನು ನೀಡಿದರೆ ನಿರ್ದಿಷ್ಟ ವ್ಯಕ್ತಿಗಳಿಗೆ ಹೈಕೋರ್ಟ್ ಮುಂದೆ ಹೇಗೆ ಅದನ್ನು ಪ್ರಶ್ನಿಸಬೇಕು ಎಂಬುದರ ಜ್ಞಾನ ದೊರೆಯುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸಕಾರಣ ನೀಡದೆ ಸ್ವೇಚ್ಛೆಯ ನಿರ್ಧಾರ ಕೈಗೊಂಡಿದ್ದು, ವೈಯಕ್ತಿಕವಾಗಿ ಕಾರಣ ನೀಡದೆ ಖಾತೆ ರದ್ದು ಪಡಿಸಿದ್ದಾರೆ. ಹೀಗಾಗಿ ಟ್ವಿಟ್ಟರ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಅದನ್ನು ಪರಿಗಣಿಸಬೇಕು ಎಂದು ನ್ಯಾಪೀಠಕ್ಕೆ ತಿಳಿಸಿದರು.
ಜಗತ್ತು ಪಾರದರ್ಶಕವಾಗಿ ಸಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69ರ ಪ್ರಕಾರ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸೂಕ್ತ ಕಾರಣವನ್ನು ನೀಡಬೇಕಾಗಿದೆ. ಯಾವುದೇ ಒಂದು ವಿಚಾರ ಸಂಬಂಧ ಜನರನ್ನು ಆಹ್ವಾನಿಸಿದ್ದು, ಅವರು ನಿಮ್ಮ ಅಭಿಪ್ರಾಯ ಒಪ್ಪಲಿಲ್ಲ ಎಂಬುದಕ್ಕೆ ಕಾರಣ ನೀಡುವುದು ಅನಿವಾರ್ಯವಲ್ಲವೇ ಎಂದು ನ್ಯಾಯಪೀಠಕ್ಕೆ ವಕೀಲರು ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ವಿದೇಶಗಳಲ್ಲಿ ಕಾರಣಗಳನ್ನು ನೀಡಿರುವುದನ್ನು ನ್ಯಾಯಾಲಯಗಳು ಹೇಗೆ ಪರಿಗಣಿಸಿವೆ ಎಂಬುದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರದ ಉದಾಹರಣೆಗಳನ್ನು ಸಲ್ಲಿಸುವಂತೆ ಪಕ್ಷಕಾರರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ನಕಲಿ ವಿಲ್ ದೃಢೀಕರಿಸಿದ ಆರೋಪ: ವಕೀಲರ ವಿರುದ್ಧದ ಪ್ರಕರಣ ರದ್ದು