ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ ಡಿಎಲ್) ಟೆಂಡರ್ಗಾಗಿ ಲಂಚ ಪಡೆದ ಆರೋಪದಲ್ಲಿ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಇಂದು ರದ್ದುಪಡಿಸಿ ಆದೇಶಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಮಾಡಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಹಾಕಿತು.
ಅರ್ಜಿದಾರರ ವಿರುದ್ದ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಲ್ಲಿ ತಿಳಿಸಿರುವ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಶಾಸಕರಾಗಿದ್ದರೂ ಅವರ ವಿರುದ್ಧ ಪೂರ್ವಾನುಮತಿ ಪಡೆಯದೆ ಪ್ರಕರಣ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಕರಣ ರದ್ದುಪಡಿಸಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ದೂರುದಾರ ಶ್ರೇಯಸ್ ಕಶ್ಯಪ್ ಅವರ ಕಂಪನಿಗೆ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ಕೆಎಸ್ಡಿಎಲ್ನಿಂದ ಟೆಂಡರ್ ಕಾರ್ಯಾದೇಶ ನೀಡಲು ಶೇ 30ರಷ್ಟು ಕಮಿಷನ್ ಕೇಳಲಾಗಿದೆ ಎಂಬ ಆರೋಪವಿದೆ. ಆದರೆ, ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡುವ ಅಧಿಕಾರ ವಿರೂಪಾಕ್ಷಪ್ಷಗೆ ಇಲ್ಲ. ಅವರು ಲಂಚಕ್ಕೆ ಯಾವುದೇ ಬೇಡಿಕೆಯಿಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಪುತ್ರನೊಂದಿಗೆ ಮಾತನಾಡುವಂತೆ ಅರ್ಜಿದಾರರು ತಿಳಿಸಿರುವುದಾಗಿ ಆರೋಪಿಸಲಾಗಿದೆ. ಒಂದು ರೂಪಾಯಿ ಪಡೆಯದೇ ಟೆಂಡರ್ ಕಾರ್ಯಾದೇಶ ನೀಡಲಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅವರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಹಾಗೂ ಸ್ವೀಕರಿಸಿಯೂ ಇಲ್ಲ ಎಂದು ವಿರೂಪಾಕ್ಷಪ್ಪ ವರ ವಕೀಲರು ವಾದ ಮಂಡಿಸಿದ್ದರು. ಈ ಅಂಶವನ್ನು ನ್ಯಾಯಪೀಠ ಪರಿಗಣಿಸಿದೆ.
ಅಲ್ಲದೆ, ಮಾಡಾಳ್ ವಿರೂಪಾಕ್ಷಪ್ಪ ಮಗನ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಅವರ ವಿರುದ್ಧದ ವಿಚಾರಣೆ ಎದುರಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ವಿರೂಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ವಿರುದ್ಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ದೂರುದಾರ ಶ್ರೇಯಾಸ್ ಕಶ್ಯಪ್ ನಿರ್ದೇಶಕರಾಗಿರುವ ಮೆರ್ಸೆಸ್ ಡಿಲಿಸಿಯಾ ಕೆಮಿಕಲ್ಸ್ ಕಂಪನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಟೆಂಡರ್ ಹಂಚಿಕೆ ಮಾಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರೂ. ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾರ್ಚ್ 2ರಂದು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳ್ ಎರಡನೇ ಆರೋಪಿಯಾಗಿದ್ದರು. 2023ರ ಮಾರ್ಚ್ 7ರಂದು ಹೈಕೋರ್ಟ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಅವರ ವಿರುದ್ಧದ ಪ್ರಕರಣವನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ: ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ ನೀಡಿದ ಬಳಿಕವಷ್ಟೇ ತೆರಿಗೆ ಸಂಗ್ರಹಿಸಬೇಕು: ಹೈಕೋರ್ಟ್