ಬೆಂಗಳೂರು: ಫ್ಲಾಟ್ ನೀಡುವುದಾಗಿ ಕೋಟ್ಯಂತರ ರೂ ಪಡೆದು ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ರಿಯಲ್ ಎಸ್ಟೇಟ್ ಕಂಪನಿ ಮಂತ್ರಿ ಡೆವಲಪರ್ಸ್ ಮತ್ತು ಅದರ ಸ್ಥಾಪಕ ಸದಸ್ಯರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿ ಆದೇಶಿಸಿದೆ.
ಹಣ ಪಡೆದು ವಂಚನೆ ಮಾಡಿರುವುದಾಗಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಸುಶೀಲ್ ಪಾಂಡುರಂಗ ಮಂತ್ರಿ, ಪ್ರತೀಕ್ ಸುಶೀಲ್ ಮಂತ್ರಿ ಮತ್ತು ಸ್ನೇಹಲ್ ಸುಶೀಲ್ ಮಂತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಗ್ರಾಹಕರು ಮತ್ತು ಕಂಪನಿಯೊಂದಿಗಿನ ಒಪ್ಪಂದದ ಉಲ್ಲಂಘನೆಗಳು ವಿವಿಧ ಪ್ರಕಾರಗಳಲ್ಲಿ ಅಥವಾ ರೂಪಗಳಲ್ಲಿ ಇರಬಹುದು. ಪ್ರತಿ ಉಲ್ಲಂಘನೆಯನ್ನು ಆರಂಭದಲ್ಲಿ ಸ್ವಯಂಚಾಲಿತವಾಗಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಉಲ್ಲಂಘನೆಯ ಹಿಂದೆ ಮೋಸ ಮಾಡುವ ಉದ್ದೇಶದ ಪುರಾವೆಗಳಿಲ್ಲದ ಹೊರತು, ಐಪಿಸಿ ಸೆಕ್ಷನ್ 406 ಅಥವಾ 420ರ ಅಡಿ ಅಪರಾಧ ಎನ್ನಲಾಗುವುದಿಲ್ಲ. ಈ ಪ್ರಕರಣದಲ್ಲಿ ಅಂತಹ ಯಾವುದೇ ಮೋಸದ ಉದ್ದೇಶ ಕಾಣಿಸುತ್ತಿಲ್ಲ. ಅಲ್ಲದೇ, ಇತರ ಆರೋಪಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತರುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದೇ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ)ವು ಮೂಲ ಎಫ್‌ಐಆರ್ ಆಧರಿಸಿ ತನಿಖೆಯನ್ನು ಆರಂಭಿಸಿತ್ತು. ಈ ಪ್ರಕರಣವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಪ್ರಕರಣದ ವಿಚಾರಣೆ ಮತ್ತು ಪ್ರಸ್ತುತ ಅರ್ಜಿ ಇತ್ಯರ್ಥವಾಗುವವರೆಗೂ 380 ಫ್ಲಾಟ್‌ಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ನಂತರ ತನಿಖಾ ಸಂಸ್ಥೆಯು ದುರುಪಯೋಗ ಮತ್ತು ಇತರ ಯೋಜನೆಗಳಿಗೆ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ 300 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಅಕ್ಟೋಬರ್ 17ರ ಆದೇಶದಲ್ಲಿ ಒಪ್ಪಂದದ ವಿವಾದಗಳಲ್ಲಿ ನಾಗರಿಕ ಮತ್ತು ಕ್ರಿಮಿನಲ್ ಪ್ರಕರಣಗಳ ನಡುವಿನ ಗಡಿ ಬಗ್ಗೆ ಸ್ಪಷ್ಟಪಡಿಸುತ್ತದೆ. ಪ್ರಕರಣ ರದ್ದು ಪಡಿಸುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? ಜೆ.ಪಿ.ನಗರದ ನಿವಾಸಿ ಧನಂಜಯ್ ಸೇರಿದಂತೆ ಮತ್ತಿತರರು ಮಂತ್ರಿ ಡೆವಲ್ಪರ್ಸ್ನ ಮಂತ್ರಿ ಸೆರೆನಿಟಿ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಕಾರಣಾಂತರಗಳಿಂದ ಯೋಜನೆ ನಿಗದಿತ ಸಮಯಕ್ಕೆ ಪೂರ್ಣಗೊಂಡಿರಲಿಲ್ಲ. ಇದರಿಂದಾಗಿ ಪ್ಲಾಟ್‌ಗಳ ಹಂಚಿಕೆ ವಿಳಂಬವಾಗಿತ್ತು. ಇದರಿಂದ ಬೇಸತ್ತಿದ್ದ ಧನಂಜಯ್ ಅವರು ಮಂತ್ರಿ ಡೆವಲಪರ್ಸ್ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ, ಫ್ಲಾಟ್ ಖರೀದಿದಾರರಿಂದ ಪಡೆದ ಹಣವನ್ನು ಇತರ ಮೂಲಗಳಿಗೆ ವೆಚ್ಚ ಮಾಡಲಾಗಿದ್ದು, ಕಾನೂನು ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ದೂರಿನಲ್ಲಿ ಕೋರಿದ್ದರು. ಆದ ಪರಿಣಾಮ ದನಂಜಯ್ ಸಲ್ಲಿಸಿದ್ದ ದೂರನ್ನು ರದ್ದುಗೊಳಿಸುವಂತೆ ಕೋರಿ ಮಂತ್ರಿ ಡೆವಲಪರ್ಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ದೂರು ರದ್ದುಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ: ಚಿನ್ನದ ಸರ ಕದ್ದ ಆರೋಪಿಗಳು ಖುಲಾಸೆ