ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದು ಮಾಡಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೆ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ಆರೋಪದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದತಿಗೆ ಸೋಮಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್.ಸುನಿಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರಕರಣವನ್ನು ತನಿಖೆ ನಡೆಸಿರುವ ತನಿಖಾಧಿಕಾರಿಯಿಂದ ಸ್ಪಷ್ಟನೆ ಪಡೆಯಲು ನ್ಯಾಯಪೀಠ ಸೂಚನೆ ನೀಡಿ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಪ್ರಕರಣದ ವಿವರ: ನಗರದ ರಾಮಕೃಷ್ಣ ಎಂಬುವರು 2013ರಲ್ಲಿ ಸಚಿವ ಸೋಮಣ್ಣ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪದಲ್ಲಿ ಹುರಳಿಲ್ಲ ಎಂದು ತಿಳಿಸಿ ಬಿ ರಿಪೋರ್ಟ್ ಸಲ್ಲಿಸಿದ್ದರು.
ಪ್ರಕರಣದ ತನಿಖೆ ಅಸಮರ್ಪಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಲೋಕಾಯುಕ್ತ ನ್ಯಾಯಾಲಯ ಬಿ ರಿಪೋರ್ಟ್ ರದ್ದುಗೊಳಿಸಿತ್ತು. ಈ ಅಂಶವನ್ನು ದೂರುದಾರ ರಾಮಕೃಷ್ಣ ದಾಖಲೆಗಳೊಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಳೆ ಹಾನಿ ವೀಕ್ಷಿಸಿದ ಸಚಿವ ಸೋಮಣ್ಣ.. ಎಸ್ಪಿಗೆ ಫುಲ್ ಕ್ಲಾಸ್